ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಗ್ಯಾರಂಟಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಸಿದ್ದರಾಮಯ್ಯ (Siddaramaiah) ಅವರು ಕೃಷಿಕರು, ಮಹಿಳೆಯರು, ಹಿಂದುಳಿದವರು ಸೇರಿ ಸರ್ವರ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಬಜೆಟ್‌ನ ಕ್ಷಣಕ್ಷಣದ ಮಾಹಿತಿ (Karnataka Budget 2024 Live Updates) ಇಲ್ಲಿ ಲಭ್ಯ ಇದೆ.
ಸಿದ್ದರಾಮಯ್ಯ ಭಾಷಣದ ಪ್ರಮುಖಾಂಶ…
* ಸಮಾಜವಾದದ ಕನಸು ನನಸಾಗಿಸಲು ಬಜೆಟ್ ಮಂಡನೆ
* ಬೆಂಗಳೂರು ಅಭಿವೃದ್ಧಿಗೆ ಕ್ರಮ, ಐಟಿ-ಬಿಟಿ ವಲಯ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ
* ಗ್ಯಾರಂಟಿ ಯೋಜನೆಗಳು ಈಗ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿವೆ
ಕೈಲಾಗದು ಎಂದು ಕೈಕಟ್ಟಿ ಕುಳಿತರೆ… ಅಣ್ಣಾವ್ರ ಹಾಡು ನೆನೆದ ಸಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ವೇಳೆ, ಬಂಗಾರದ ಮನುಷ್ಯ ಸಿನಿಮಾದ, ಡಾ.ರಾಜ್‌ಕುಮಾರ್ ಅಭಿನಯದ “ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸ ಮುಂದೆ” ಎಂಬ ಹಾಡು ಸ್ಮರಿಸಿದರು. ಹಾಗೆಯೇ, ಕುವೆಂಪು ಅವರನ್ನೂ ಸಿದ್ದರಾಮಯ್ಯ ನೆನೆದರು.
ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ
ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರನ್ನು ನೆನೆಯುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಆರಂಭಿಸಿದ್ದಾರೆ. ಸಮಾಜವಾದದ ಕನಸು ಸಾಕಾರಗೊಳಿಸುವ ದಿಸೆಯಲ್ಲಿ ಬಜೆಟ್ ಮಂಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಎಂದು ತಿಳಿಸಿದರು.
ಏನಿಲ್ಲ ಏನಿಲ್ಲ, ಬಜೆಟ್‌ನಲ್ಲಿ ಏನಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಟಕ್ಕರ್ ಕೊಟ್ಟಿದೆ. ಏನಿಲ್ಲ, ಏನಿಲ್ಲ, ಬಜೆಟ್‌ನಲ್ಲಿ ಏನಿಲ್ಲ ಎಂಬ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಟಾಂಗ್ ಕೊಟ್ಟಿದೆ. ಆದರೆ, ಪ್ಲೆಕಾರ್ಡ್‌ಗಳನ್ನು ವಿಧಾನಸಭೆಯ ಒಳಗೆ ತೆಗೆದುಕೊಂಡು ಹೋಗಲು ಮಾರ್ಷಲ್‌ಗಳು ಬಿಡಲಿಲ್ಲ.
ಸೂಟ್‌ಕೇಸ್ ಬದಲು ಬ್ಯಾಗ್ ಹಿಡಿದ ಸಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸೂಟ್‌ಕೇಸ್ ಬದಲು ಬ್ಯಾಗ್ ಹಿಡಿದು ತೆರಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರಿ ಸೌಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಲಾಗಿದ್ದು, ಅದನ್ನು ತೆಗೆದುಕೊಂಡು ಸಿದ್ದರಾಮಯ್ಯ ಅವರು ಕಾವೇರಿಯಿಂದ ವಿಧಾನಸೌಧಕ್ಕೆ ತೆರಳಿದರು.