Site icon Vistara News

Karnataka Budget Session 2024: ಬಿಜೆಪಿಯಿಂದ ಬಜೆಟ್‌ ಬಾಯ್ಕಾಟ್‌; ಇತಿಹಾಸದಲ್ಲೇ ಮೊದಲು ಎಂದ ಸಿದ್ದರಾಮಯ್ಯ

BJP Protest

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್‌ (Karnataka Budget Session 2024) ಅನ್ನು ಮಂಡಿಸಿದ್ದಾರೆ. ಆದರೆ, ಬಜೆಟ್‌ ಮಂಡನೆ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದರಿಂದ ಸಹಿಸದ ಬಿಜೆಪಿ ಹಾಗೂ ಜೆಡಿಎಸ್‌, ಬಾಯ್ಕಾಟ್‌ ಮಾಡಿ ಪ್ಲೇಕಾರ್ಡ್‌ಗಳನ್ನು ಪ್ರದರ್ಶನ ಮಾಡಿ ಆಕ್ರೋಶವನ್ನು ಹೊರಹಾಕಿದ್ದವು. ಇದು ಸಿಎಂ ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಬಜೆಟ್ ಮಂಡನೆ ಮಾಡುವಾಗ ಒಂದು ವಿಪಕ್ಷ ಬಾಯ್ಕಾಟ್ ಮಾಡಿದ್ದು ಇದೇ ಮೊದಲು ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವಾಗ ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಬಿಜೆಪಿ- ಜೆಡಿಎಸ್ ಶಾಸಕರು ಶುಕ್ರವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದವು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಶಾಸಕ ಅರವಿಂದ ಬೆಲ್ಲದ ಹಾಗೂ ಶಾಸಕರು ಉಪಸ್ಥಿತರಿದ್ದರು.

CM Siddaramaiah budget 2024

ಆದರೆ, ಇದಕ್ಕೂ ಮೊದಲು ಸದನದಲ್ಲಿ ಸಿಎಂ ಬಜೆಟ್‌ ಮಂಡನೆ ಮಾಡುವಾಗ ಕೇಂದ್ರದ ವಿರುದ್ಧ ಆರೋಪಗಳ ಸುರಿಮಳೆಗೈದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದನದಲ್ಲಿ ಗದ್ದಲ ಮಾಡಿದರು. ಕೊನೆಗೆ “ಏನಿಲ್ಲ.. ಏನಿಲ್ಲ.. ಈ ಬಜೆಟ್‌ನಲ್ಲಿ ಏನಿಲ್ಲ..” ಎಂಬ ಪ್ಲೇಕಾರ್ಡ್‌ ಹಿಡಿದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೊರನಡೆದರು. ಬಳಿಕ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: Karnataka Budget Session 2024: 5 ಗ್ಯಾರಂಟಿ ಯೋಜನೆಗೆ 52,009 ಕೋಟಿ ಮೀಸಲು; ಯುವನಿಧಿಗೆ ಅತಿ ಕಡಿಮೆ!

ಸಿಎಂ ಸಿದ್ದರಾಮಯ್ಯ ಆಕ್ರೋಶ

ಬಜೆಟ್‌ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ‌ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಿದ್ದರು. ಗ್ಯಾರಂಟಿಗಳ ನಡುವೆಯೂ ನಾವು ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಮಹಿಳೆಯರು ಮತ್ತು ಯುವಕರಿಗೆ ಅಪಮಾನ ಆಗುವ ರೀತಿ ಫ್ರೀಬೀಸ್ ಅಂತ ಹೇಳುತ್ತಿದ್ದರು. 18171 ಕೋಟಿ ರೂಪಾಯಿಗಳು ಕೊಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಇವತ್ತಿನವರೆಗೂ ಒಂದು ಸಭೆಯನ್ನು ಸಹ ಕೇಂದ್ರ ಸರ್ಕಾರ ಮಾಡಿಲ್ಲ. ನಾನು 1983ರಿಂದಲೂ ಸದನದಲ್ಲಿ ಇದ್ದೇನೆ. ಬಜೆಟ್ ಮಂಡನೆ ಮಾಡುವಾಗ ಒಂದು ವಿಪಕ್ಷ ಬಾಯ್ಕಾಟ್ ಮಾಡಿದ್ದು ಇದೇ ಮೊದಲು. ಆ ಸುನಿಲ್ ಕುಮಾರ್ ಇಷ್ಟು ದೊಡ್ಡ ಪ್ರಮಾಣದ ಬಜೆಟ್‌ ಅನ್ನು ಏನಿಲ್ಲ ಏನಿಲ್ಲ ಅಂತ ಹೇಳುತ್ತಾನೆ. ಬಿಜೆಪಿಯವರು ಪ್ಲೇಕಾರ್ಡ್ ಹಿಡಿದುಕೊಂಡು ಬಂದಿದ್ದರು. ಬಜೆಟ್ ಕೇಳಬಾರದು ಅಂತ ಮೊದಲೇ ನಿರ್ಧಾರ ಮಾಡಿಕೊಂಡು ಬಂದಿದ್ದರು ಎಂದು ಆರೋಪ ಮಾಡಿದ್ದಾರೆ.

Exit mobile version