Site icon Vistara News

Karnataka Budget Session 2024: ರೈತರ ಆತ್ಮಹತ್ಯೆ ಕಡಿಮೆ ಎಂದು ಸುಳ್ಳು ಹೇಳಿದ ಸರ್ಕಾರ: ಬಿ.ವೈ. ವಿಜಯೇಂದ್ರ ಕಿಡಿ

Karnataka Budget Session 2024 Congress govt lied about farmers says BY Vijayendra

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಚರ್ಚೆಗಳು ಕಾವೇರುತ್ತಿವೆ. ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ಮೇಲೆ ಕೆಲವು ಆರೋಪಗಳನ್ನು ಹೊರಿಸಿರುವ ಕಾಂಗ್ರೆಸ್‌ ಸರ್ಕಾರದ ಮೇಲೆ ಬಿಜೆಪಿಯ ನಾಯಕರು ಹರಿಹಾಯುತ್ತಿದ್ದಾರೆ. ರಾಜ್ಯಪಾಲರ ಭಾಷಣ ಮೇಲೆ ಮಾತನಾಡಿದ ಬಿಜೆಪಿ‌ ಶಾಸಕ ಬಿ.ವೈ. ವಿಜಯೇಂದ್ರ (BY Vijayendra), ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ. ಇದು ಈ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಅಂತ ಸುಳ್ಳು ಹೇಳಿಸಿದೆ, ಗ್ಯಾರಂಟಿಗಳ (Congress Guarantee Scheme) ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂಪಾಯಿ ಕೊಡುವ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಬರಗಾಲ ಇದ್ದು, 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಎಂಬುದಾಗಿ ರಾಜ್ಯಪಾಲರ ಮೂಲಕ ಹೇಳಿಸಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆ ಪ್ರಕರಣವು ಹೆಚ್ಚು ದಾಖಲಾಗಿದೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನವನ್ನು ಹೊರಹಾಕಿದರು.

ರೈತರಿಗೆ ಹಾಲಿನ ಪ್ರೋತ್ಸಾಹ ಧನ‌ ಕಡಿತ ಮಾಡಿದ್ದಾರೆ. ರೈತರಿಗೆ ಪಂಪ್‌ಸೆಟ್ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಆತ್ಮಹತ್ಯೆಯು ಹಿಂದೆ ಆಗೇ ಇಲ್ಲ ಅಂತ ಹೇಳುತ್ತಿಲ್ಲ. ಆದರೆ ಈಗ ನಡೆಯುತ್ತಿರುವ ಆತ್ಮಹತ್ಯೆಗಳಿಗೆ ಸಚಿವರು ಬೇಜವಾಬ್ದಾರರಾಗಿದ್ದಾರೆ. ಸರ್ಕಾರಕ್ಕೆ ಕಾಳಜಿ ಇಲ್ಲ. ಸಚಿವ ಶಿವಾನಂದ ಪಾಟೀಲ್‌ ಅವರು ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದಿದ್ದರು. ರೈತರು ಬರಗಾಲ ಬರಲಿ ಎಂದು ಸಹ ಕಾಯುತ್ತಾರೆ ಎಂಬುದಾಗಿ ಇದೇ ಶಿವಾನಂದ ಪಾಟೀಲರು ಹೇಳಿದ್ದಾರೆ. ಈ ಮೂಲಕ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ನಯನ ಮೋಟಮ್ಮ, ರೈತರ ಮೇಲೆ ಕಾಳಜಿ ಇದ್ರೆ ಬರ ಪರಿಹಾರ ಕೇಳಲು ದೆಹಲಿಗೆ ಹೋಗಿ. ದೆಹಲಿಗೆ ರೈತರು ಬರದಂತೆ ತಡೆ ಒಡ್ಡುತ್ತಿರುವುದು ನಿಮ್ಮದೇ ಕೇಂದ್ರ ಸರ್ಕಾರ ತಾನೇ? ನಿಮ್ಮ ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ ಎಂದು ಹೇಳಿದರು.

ರಾಜ್ಯಪಾಲರ ಭಾಷಣ ಎಲ್ಲ ಆದರ್ಶಗಳನ್ನು ಗಾಳಿಗೆ ತೂರಿದೆ. ಶಕ್ತಿ ಯೋಜನೆಯಿಂದ ಶಾಲೆಗೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್‌ಗಳ ತೊಂದರೆ ಆಗಿದೆ. ಸ್ವಾತಂತ್ರ್ಯ ಬಂದಾಗಿಂದ ಹೆಚ್ಚಿನ ಅವಧಿ ಆಡಳಿತ ನಡೆಸಿರೋದು ಇದೇ ಕಾಂಗ್ರೆಸ್‌ನವರು. ಬಡವ ಬಡವನಾಗಿಯೇ ಇದ್ದಾನೆ. ರೈತ ಕಷ್ಟಪಡುತ್ತಿರುವುದು ಈ ಕಾಂಗ್ರೆಸ್‌ನವರ ಕಾರಣದಿಂದಲೇ ಆಗಿದೆ. ಕರ್ನಾಟಕ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿಗಳಿಂದ, ಅಭಿವೃದ್ಧಿ ಶೂನ್ಯದಿಂದ ನಮ್ಮ ರಾಜ್ಯ ಕಳೆದ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ರಾಜ್ಯ ವಿಜಯನಗರ ಸಾಮ್ರಾಜ್ಯದಷ್ಟು ಸಂಪತ್ಭರಿತವಾಗಿದೆ ಅಂತ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ದರ ಏರಿಕೆ ಮಾಡಿದ್ದಾರೆ. ಮುದ್ರಾಂಕ ಶುಲ್ಕ, ವಿದ್ಯುತ್, ಹಾಲಿನ ದರ, ಮದ್ಯದ ದರಗಳನ್ನು ಹೆಚ್ಚಿಸಲಾಗಿದೆ. ಈ ಸರ್ಕಾರವು ಗಂಡನ ಬಳಿ ಹಣವನ್ನು ಕಿತ್ತು, ಹೆಂಡತಿಗೆ ಕೊಡುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.

Exit mobile version