ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ರಾಷ್ಟ್ರೀಯವಾದ, ಜಾತ್ಯತೀತವಾದದ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ಮಾತಿನ ಸಮರಕ್ಕೆ ಕಾರಣವಾಗಿತ್ತು. ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ಈ ಚರ್ಚೆಯ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (DR BR Ambedkar) ಅವರ ಬಗ್ಗೆ ಪ್ರಸ್ತಾಪ ಮಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಅಂಬೇಡ್ಕರ್ ಅವರಿಗೆ ಆರಡಿ ಮೂರಡಿ ಜಾಗ ಕೊಡಲಿಲ್ಲ ನೀವು ಎಂದು ಹೇಳಿದರು. ಇದಕ್ಕೆ ಸಿಎಂ ಉತ್ತರಿಸುವಾಗ, ಆ ಸತ್ಯವನ್ನು ಒಪ್ಪಿಕೊಂಡರಾದರೂ ನಾನೂ ಶೂದ್ರ, ನೀನು ಶೂದ್ರ, ರವಿಕುಮಾರ್ ಶೂದ್ರ ಮತ್ಯಾಕ್ರೀ ಇದೆಲ್ಲ ಎಂದು ಸಿಎಂ ಸಿದ್ದರಾಮಯ್ಯ ಆ ಚರ್ಚೆಗೆ ತೆರೆ ಎಳೆದರು.
ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನ ರಾಷ್ಟ್ರೀಯವಾದಿ ಹೋರಾಟ ಮತ್ತು ಚಳವಳಿಯ ಚರಿತ್ರೆ ಬಗ್ಗೆ ವಿವರಣೆ ನೀಡಿದರು. ಈ ವೇಲೆ ಜೆಡಿಎಸ್ ಸದಸ್ಯ ಎಸ್.ಎಲ್. ಬೋಜೇಗೌಡ ಅವರತ್ತ ನೋಡಿದ ಸಿಎಂ ಸಿದ್ದರಾಮಯ್ಯ, ಸರ್ವೋದಯವಾಗಲೀ ಸರ್ವರಲ್ಲಿ ಎಂದು ಕುವೆಂಪು ಹೇಳಿದ್ದಾರೆ. ಏನ್ ಹೇಳಿದ್ದಾರೆ ಹೇಳಯ್ಯ ಎಂದು ಬೋಜೇಗೌಡರಿಗೆ ಕೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಬೋಜೇಗೌಡ ಅವರು, ಸರ್ವೋದಯವಾಗಲೀ ಸರ್ವರಲಿ ಎಂದು ಹೇಳಿದರು. ಆಗ ಸಿಎಂ ಸಿದ್ದರಾಮಯ್ಯ, ಮತ್ತೆ ನೀವು ಹಿಂಗೆ ಹೇಳಿ ಆ ಕಡೆ (ಬಿಜೆಪಿ) ಸೇರ್ಕೊಂಡಿದ್ದೀರಲ್ಲ? ಜೆಡಿಎಸ್ (JDS) ಅಂತ ಹೋಗಿ ಈಗ ಜೆಡಿಸಿ (JDC – C – Communal) ಆಗಿದೆ ಎಂದು ಸಿಎಂ ಹೇಳಿರುವುದು ಪ್ರತಿಪಕ್ಷ ಬಿಜೆಪಿಯನ್ನು ಕೆರಳಿಸಿದೆ.
ಆಗ ಪರಿಷತ್ ಸದಸ್ಯ ಎನ್. ರವಿಕುಮಾರ್, ನಿಮ್ಮ ಬಳಿ ಇದ್ದರೆ ಏನೂ ಆಗಲ್ಲ ಅಂತ ಎಲ್ಲ ಬಿಟ್ಟುಹೋಗುತ್ತಿದ್ದಾರೆ. ದೇಶಾದ್ಯಂತ ಎಲ್ಲ ಪಕ್ಷಗಳು ಇಂಡಿಯಾ (I.N.D.I.A) ಮೈತ್ರಿಕೂಟವನ್ನು ತೊರೆಯುತ್ತಿದ್ದಾರೆ ಎಂದು ಹೇಳಿದರು. ಆಗ ಎದ್ದುನಿಂತ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಆರಡಿ ಮೂರಡಿ ಜಾಗ ಕೊಡಲಿಲ್ಲ ನೀವು ಎಂದು ಕುಟುಕಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅದು ಸತ್ಯ ಕೂಳಿತುಕೊಳ್ಳಿ. ಆದರೆ, ಆಗ ಅಂಬೇಡ್ಕರ್ ಅವರು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ರಿಪಬ್ಲಿಕನ್ ಪಾರ್ಟಿಯಲ್ಲಿದ್ದರು ಎಂದು ಹೇಳಿದರು. ಅದಕ್ಕೆ ತಿರುಗೇಟು ನೀಡಿದ ಕೋಟ ಶ್ರೀನಿವಾಸ ಪೂಜಾರಿ, ಆದರೂ ಅವರು ಸಂವಿಧಾನ ಬರೆದವರು. ಅವರ ಅಂತ್ಯ ಸಂಸ್ಕಾರ ಜಾಗ ಕೊಡದೇ ಇರೋರು ನೀವು ಎಂದು ಹೇಳಿದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನಾನೂ ಶೂದ್ರ, ನೀನು ಶೂದ್ರ, ರವಿಕುಮಾರ್ ಶೂದ್ರ ಮತ್ಯಾಕ್ರೀ ಇದೆಲ್ಲ ಎಂದು ಚರ್ಚೆಗೆ ತೆರೆ ಎಳೆದರು.
ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು
ಬಳಿಕ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರವಾಗಿರಲಿದೆ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು. ನಮ್ಮ ಸಂವಿಧಾನ ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ, ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ‘ಕೋ ಆಪರೇಟಿವ್ ಫೆಡರಿಲಿಸಂ’ ಎಂದು ಹೇಳುತ್ತಾರೆ. ಆದರೆ, ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ ಎಂದು ಹೇಳಿದರು.
ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯದಿಂದ 4.30 ಲಕ್ಷ ಕೋಟಿ ರೂಪಾಯಿ ತೆರಿಗೆ ಹೋಗುತ್ತಿದೆ. ತೆರಿಗೆ ಹಂಚಿಕೆಯಲ್ಲಿ 2023-24ಕ್ಕೆ 37252 ಕೋಟಿ ರೂ. ಬರುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಂದ 13005 ಕೋಟಿ ರೂಪಾಯಿಯಂತೆ ಒಟ್ಟು 50257 ಕೋಟಿ ಮಾತ್ರ ರೂ. ಬರುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ಧವಾಗಿ ಹೆಚ್ಚಾಗಬೇಕು. ಆದರೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋದಂತೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು, ಕನ್ನಡಿಗರ ಹಕ್ಕಿನ ತೆರಿಗೆ ಮತ್ತು ಅನುದಾನದ ಪಾಲು ಕಡಿಮೆ ಆಗುತ್ತಿದೆ. ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ರಾಜ್ಯ ಬಲಿಷ್ಠವಾದರೆ, ಕೇಂದ್ರ ಬಲಿಷ್ಠವಾಗುತ್ತದೆ ಎಂದರು.
ಇದನ್ನೂ ಓದಿ: Next CM: 2.5 ವರ್ಷ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ: ಡಿ.ಕೆ. ಸುರೇಶ್ ಭವಿಷ್ಯ
ರಾಜ್ಯಕ್ಕೆ ಮತ್ತು ರಾಜ್ಯದ ಜನತೆಯ ಪಾಲಿಗೆ ಆಗುತ್ತಿರುವ ಅನ್ಯಾಯವನ್ನು ನಾವು ಪ್ರಶ್ನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿಭಜನೆಯ ಮಾತನಾಡುತ್ತೇವೆ ಎಂದು ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡುತ್ತಿದ್ದಂತೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಪ್ರಧಾನಿ ಮೋದಿ ಅವರು ಹಾಗೆ ಹೇಳಿಯೇ ಇಲ್ಲ ಎಂದರು. ಆಗ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಪ್ರಧಾನಿ ಮೋದಿಯವರಂತೂ ಸುಳ್ಳು ಹೇಳುವುದು ಮೂಮೂಲು. ಬಿಜೆಪಿ ಸದಸ್ಯರೂ ಸುಳ್ಳು ಹೇಳುವುದನ್ನು ಮುಂದುವರಿಸಿದ್ದಾರೆ ಎಂದು ಹೇಳಿದರು. ಈ ಹೇಳಿಕೆ ವಿಪಕ್ಷದವರು ಆಕ್ರೋಶವನ್ನು ವ್ಯಕ್ತಪಡಿಸಿದರು.