ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ, ವಿಶ್ವಬ್ಯಾಂಕ್‌ನಿಂದ ಸಾಲ ಪಡೆದು ಕರ್ನಾಟಕದ 7,110 ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲು (Road Construction) ತೀರ್ಮಾನಿಸಿರುವುದು ಪ್ರಮುಖ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ. ವ್ಯಯಿಸುತ್ತಿರುವ ಮಧ್ಯೆಯೇ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಉತ್ತಮ ತೀರ್ಮಾನವಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್.ಕೆ.ಪಾಟೀಲ್ ಅವರು ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. “ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಾಜ್ಯದ 7,110 ರಸ್ತೆಗಳ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸುಮಾರು 5,190 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಇದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲಾಗುತ್ತದೆ. ಎರಡು ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುವುದು” ಎಂಬುದಾಗಿ ತಿಳಿಸಿದರು.
ಕಲಬುರಗಿಯಲ್ಲಿ ವಸತಿ ಯೋಜನೆ
“ಕಲಬುರಗಿಯ ಕುಸನೂರು ಗ್ರಾಮದಲ್ಲಿ ವಸತಿ ಬಡಾವಣೆ ನಿರ್ಮಿಸಲು ಕೂಡ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಮಾರು 132 ಕೋಟಿ ರೂ. ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗುತ್ತದೆ. ಇದರ ಜತೆಗೆ, ಆಸ್ತಿ ತೆರಿಗೆ, ನೀರಿನ ವಸೂಲಿಗೂ ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿವಿಧ ನಗರ ಪ್ರದೇಶಗಳಲ್ಲಿ ಆಸ್ತಿ, ನೀರಿನ ತೆರಿಗೆ ವಸೂಲಿ ಮಾಡಲಾಗುವುದು. ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಬರಲಿವೆ. ಸ್ವಸಹಾಯ ಗುಂಪುಗಳಿಗೆ ಇದರ ಜವಾಬ್ದಾರಿ ನೀಡಲಾಗಿದೆ” ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ನಡೆದ ಸಚಿವ ಸಂಪುಟ ಸಭೆಯಲ್ಲಿ (cabinet meeting) ಸಚಿವರ ಸಲಹೆಯನ್ನೂ ಮೀರಿ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಲು ಸಿಎಂ ಒಲವು ತೋರಿದ್ದಾರೆ. ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣಗೊಳಿಸುವ ಮಾತನ್ನಾಡಿರುವ ಸಿಎಂ ಸಿದ್ದರಾಮಯ್ಯ, 27%ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ. ನೌಕರರು ನಿರೀಕ್ಷೆ ಮಾಡಿದ ಹೆಚ್ಚಳ ಜಾರಿಯಾಗುವ ಸಾಧ್ಯತೆಯಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಪುಟ ಸಭೆ ಸಿಎಂಗೆ ಬಿಟ್ಟಿದೆ.
ಇದನ್ನೂ ಓದಿ: CM Siddaramaiah: ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ: 27% ವೇತನ ಹೆಚ್ಚಳಕ್ಕೆ ಮುಂದಾದ ಸಿಎಂ