Site icon Vistara News

Karnataka Cabinet: ಸಿಎಂ ಮಾಡೋದೂ ಇಳಿಸೋದೂ ಗೊತ್ತಿದೆ! ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಬಿ.ಕೆ ಹರಿಪ್ರಸಾದ್‌!

loose-talk-BK Hariprasad lashes out aganin over bjp leaders

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ʼʼಸಿಎಂ ಆಯ್ಕೆ ಮಾಡುವುದು, ಇಳಿಸುವುದು ಎರಡೂ ನನಗೆ ಗೊತ್ತಿದೆʼʼ ಎಂದು ಸಿದ್ದರಾಮಯ್ಯಗೆ ಟಾಂಗ್‌ ನೀಡಿದ್ದಾರೆ.

ಸಂಪುಟ ಸಚಿವ (Karnataka Cabinet) ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಭಾರೀ ಅಸಮಾಧಾನಗೊಂಡಿರುವ ಹರಿಪ್ರಸಾದ್, ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. ಸಿದ್ದರಾಮಯ್ಯ ವಿರುದ್ಧ ಸಮುದಾಯದ ಅಸ್ತ್ರ ಪ್ರಯೋಗ ಮಾಡಿರುವ ಬಿ.ಕೆ ಹರಿಪ್ರಸಾದ್ ಅವರ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ.

ʼʼಕರ್ನಾಟಕದಲ್ಲಿ ರಾಜಕೀಯವಾಗಿ ಈಡಿಗ, ಬಿಲ್ಲವ, ದೀವರ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಅವಕಾಶ ವಂಚಿರಾಗುತ್ತಿರುವುದು ನೋಡಿದರೆ ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರು ಒಟ್ಟಿಗೆ ಸೇರಬೇಕು ಎಂದು ನಾವು 2013ರಲ್ಲಿ ಬೆಂಬಲ ಕೊಟ್ಟಿದ್ದೆವು. ಬೆಂಬಲ ಕೊಟ್ಟ ಬಳಿಕ ನಾವು ಕಾಂಗ್ರೆಸ್ ಆಗಲಿ, ಸಿಎಂ, ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ. ಸ್ವಾರ್ಥಕ್ಕೆ ಯಾವುದನ್ನೂ ಕೇಳುವುದಿಲ್ಲʼʼ ಎಂದು ಹರಿಪ್ರಸಾದ್‌ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚನ್ನಯ್ಯ ಪಾರ್ಕ್‌ಗೆ 5 ಕೋಟಿ ರೂ. ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನೂ ಸಹಾಯ ಮಾಡಲು ಆಗಲ್ಲ, ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಮಂಗಳೂರು ವಿವಿಯಲ್ಲಿ ಗುರುಪೀಠ ಸ್ಥಾಪನೆಗೆ ನಾನು ಎಂಪಿ ಆದಾಗ ಹಣ ಕೊಟ್ಟಿದ್ದೆ. ಕಟ್ಟಡ ಅರ್ಧಕ್ಕೆ ನಿಂತಿದೆ, ಹಣ ಕೊಟ್ಟಿಲ್ಲ, ಆದರೆ ಅವರ ಸಮಾಜಕ್ಕೆ ಎಷ್ಟು ಕೊಟ್ಟಿದ್ದಾರೆ ಎಂದು ಸ್ವಾಮೀಜಿಗಳು ನೋಡಲಿ. ಹಿಂದುಳಿದ ವರ್ಗ ಎಂದರೆ ಒಂದು ಜಾತಿ‌ ಮಾತ್ರವಲ್ಲ. ಜಾತಿ ಬೇರೆ, ವರ್ಗ ಬೇರೆ, ನಾವು ವರ್ಗದಲ್ಲಿ ಬರುತ್ತೇವೆ. ವರ್ಗದಲ್ಲಿ ಬರುವ ಎಲ್ಲರಿಗೂ ಸಮಾನ ಹಕ್ಕು ದೊರೆಯಬೇಕು. 11 ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ನಿರ್ಣಾಯಕವಾಗಿದ್ದೇವೆ. ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ, ನಾಲ್ಕು ಜನ ಟಿಕೆಟ್ ವಂಚಿತರಾದರು. 2 ಬಿಲ್ಲವ, 1 ಈಡಿಗ, 1 ದೀವರು ವಂಚಿತರಾದರು. ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳು ಅಲ್ಲ, ನೀವು ಮುಂದೆ ಬರಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತಬಾರದು. ಆದರೆ ಅಲ್ಪಸಂಖ್ಯಾತರನ್ನು‌ ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ʼʼಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಬಿಟ್ಟುಕೊಡಲಿ. ನಮ್ಮನ್ನು ಯಾಕೆ ಕಟ್ ಮಾಡ್ತಾರೆ? ನಾವು ಹೆಚ್ವು ಇರುವ ಜಾಗದಲ್ಲಿ ಅವಕಾಶ ಕೊಡಬೇಕು. ನಾವೇನು ಮಂಡ್ಯ, ಬೆಳಗಾವಿಯಲ್ಲಿ ಕೊಡಿ ಎಂದು ಕೇಳುವುದಿಲ್ಲ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಕಡೆ ನಮ್ಮವರು ನಿರ್ಣಾಯಕ. ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ನಾನು ಎಂಪಿ ಆಗಿದ್ದಾಗ ಈಡಿಗ ಸಮುದಾಯ ಭವನಕ್ಕೆ, ಶಾಲೆ, ವಸತಿ ಶಾಲೆಗೆ ಹಣ ಕೊಟ್ಟಿದ್ದೇನೆ. ನಾರಾಯಣಗುರು ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಘೋಷಣೆ ಮಾಡಿದರು, ಅದಕ್ಕೆ ಹಣ ಕೊಟ್ಟಿಲ್ಲ. ನಾವು ಒತ್ತಡ ತಂದಿದ್ದೇವೆʼʼ ಎಂದರು.

ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು. ನಮ್ಮ ಪೀಳಿಗೆ ನೂರು ವರ್ಷಗಳ ಹಿಂದೆ ಹೋಗಿದೆ. ʼಈಗಾಗಲೇ ಒಬ್ಬರು ಮಂತ್ರಿ ಆಗಿದ್ದಾರಲ್ಲ, ಇನ್ನೊಬ್ಬರು ಯಾಕೆʼ ಅಂತ ಕೆಲವರು ಸ್ವಾಮೀಜಿಗಳ ಬಳಿ ಹೇಳುತ್ತಾರೆ. ಮಂಗಳೂರಿನಲ್ಲಿ 600 ಜನ ಜೈಲಿಗೆ ಹೋದರು, ಅವರ ಪೈಕಿ 400 ಜನ ಬಿಲ್ಲವರು. ಯಾರದ್ದೊ ತೆವಲಿಗೆ ಕೊಲೆ‌ ಮಾಡುವುದು, ಕೊಲೆ ಆಗುವುದು ನಡೆಯುತ್ತಿದೆ. ನಾರಾಯಣಗುರು ಸಿದ್ಧಾಂತ ನಾವು ಮರೆತಿದ್ದೇವೆ. ನಾವು ಸಂಘಟಿತರಾಬೇಕು, ಇಲ್ಲ ಅಂದರೆ ಕಡೆಗಣಿಸುತ್ತಾರೆ. ಹಿಂದೆ ಜಾಲಪ್ಪ ಅವರಿಂದ ಎಲ್ಲಾ ಸಹಾಯ ಪಡೆದುಕೊಂಡರು. ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಾದರೆ, ಜಾಲಪ್ಪ ಅವರ ಮೊಮ್ಮಗನೇ ಅಲ್ಲ ಎನ್ನುವ ಮಟ್ಟಕ್ಕೆ ಚರ್ಚೆ ಮಾಡಿದರು. 1985ರವರೆಗೆ ಅಬಕಾರಿ ಗುತ್ತಿಗೆದಾರರು ಸರ್ಕಾರ ಮಾಡುತ್ತಿದ್ದರು. 2008ರಲ್ಲಿ ಯಡಿಯೂರಪ್ಪ ಅವರು ಸಾರಾಯಿ ಬ್ಯಾನ್ ಮಾಡಿದರು. ಬೇರೆ ಜಾತಿಯ ಕಸುಬಿಗೆ ಕೈ ಹಾಕಿದ್ದರೆ ರಕ್ತಪಾತ ಆಗಿರುತ್ತಿತ್ತು. ನಾವು ಸುಮ್ಮನೆ ಪಾನಿಪುರಿ, ತರಕಾರಿ ಮಾರಾಟ ಮಾಡ್ತಾ ಇದ್ದೇವೆ. ನಾನು ಬಿಜೆಪಿ ಪಕ್ಷದ ವಿರುದ್ಧ ಮಾತಾಡುತ್ತಿಲ್ಲ. ಬಹಳ ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ನಾನು ಮಂತ್ರಿ ಆಗುವುದು ಬಿಡುವುದು ಬೇರೆ ಪ್ರಶ್ನೆ. 5 ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರ ವಹಿಸಿದ್ದೇನೆ. ಛತ್ತೀಸ್‌ಗಢದ ಸಿಎಂ ನಮ್ಮ ನೆಂಟರಲ್ಲ, ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ಸಿಎಂ ಮಾಡುವುದು, ಕೆಳಗೆ ಇಳಿಸುವುದು ನನಗೆ ಚನ್ನಾಗಿ ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೆ ಬೆಂಗಳೂರಿನಲ್ಲಿ 49 ವರ್ಷ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಓಡಿಸಿ ಬಿಡುತ್ತಿದ್ದರು; ಅದರಲ್ಲಿ ನಮ್ಮವರೂ ಇರುತ್ತಾರೆ. ಶೋಷಣೆಗೆ ಒಳಗಾಗಬಾರದು ಎಂದು ಹರಿಪ್ರಸಾದ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್‌ ಪ್ರಹಾರ

Exit mobile version