ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಆಗಸ್ಟ್‌ನಲ್ಲಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದೆ. ಸಂಪುಟ ಸಭೆಯ ನಂತರ ಕಾನೂನು ಸಚಿವ ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಈಗಾಗಲೆ ರಾಜ್ಯದಲ್ಲೆ ಪಿಎಸ್‌ಐ ನೇಮಕ ಹಗರಣ, 40% ಕಮಿಷನ್ ವಿಚಾರ ಸೇರಿ ಅನೇಕ ಅಂಶಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಧಿವೇಶನದಿಂದ ಲಾಭ ಮಾಡಿಕೊಳ್ಳಲು ಸರ್ಕಾರ ಆಲೋಚಿಸುತ್ತಿದೆ.
ಸಂಪುಟ ಸಭೆಯ ಇನ್ನಿತರೆ ನಿರ್ಣಯಗಳ ಕುರಿತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.
೧. ಹಟ್ಟಿ ಚಿನ್ನದ ಗಣಿ ಕಂಪನಿಯು ಸರ್ಕಾರದಿಂದ ಗುತ್ತಿಗೆ ಪಡೆದ ಭೂಮಿಯ ಉತ್ತರ ಭಾಗದಲ್ಲಿ ಚಿನ್ನದ ನಿಕ್ಷೇಪಕ್ಕೆ ಮುಕ್ತ ಪ್ರವೇಶವನ್ನು ಕಲ್ಪಿಸಬೇಕು. ಈ ಮೂಲಕ ಗಣಿಗಾರಿಕೆ ಆರಂಭಿಸಲು 307.95 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಲಾಯಿತು.
೨. ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ಸಾಮಾನ್ಯ ರೋಗಗಳ ಚಿಕಿತ್ಸೆಗೆ 438 ನಮ್ಮ ಕ್ಲಿನಿಕ್ ಆರಂಭಿಸಿ, ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳ ನೇಮಕಕ್ಕೆ ನಿರ್ಧಾರ.
೩. ಚಿತ್ರದುರ್ಗದ ಮುರುಘಾ ಮಠದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚುವರಿ ಹತ್ತು ಕೋಟಿ ರೂ. ನೀಡಲು ನಿರ್ಧಾರ
೪. ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ: ಚಿಕ್ಕೋಡಿ- 15 ಕೋಟಿ ರೂ., ಕೋಲಾರ 25 ಕೋಟಿ ರೂ., ಶ್ರೀನಿವಾಸ ಪುರ 15 ಕೋಟಿ ರೂ., ಬಳ್ಳಾರಿ 121 ಕೋಟಿ ರೂ., ರಾಯಚೂರು 27 ಕೋಟಿ ರೂ., ದಾವಣಗೆರೆ 22 ಕೋಟಿ ರೂ.
೫. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನ ನಿರಾಣಿ ಶುಗರ್‌ಗೆ ಕೊಡಲಾಗಿದೆ. ಮುದ್ರಾಂಕ ಶುಲ್ಕ ನೀಡದೇ ಇರುವ ಕಾರಣ ನೋಂದಣಿ ಮಾಡಲಾಗಿಲ್ಲ. ಸರ್ಕಾರವೇ 10 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿ ಮಾಡಿಸಲು ತೀರ್ಮಾನಿಸಲಾಗಿದೆ. ಹತ್ತು ವರ್ಷಗಳ ಒಳಗೆ ಸಂಸ್ಥೆಯು ಸರ್ಕಾರಕ್ಕೆ ಮುದ್ರಾಂಕ ಶುಲ್ಕವನ್ನು ವಾಪಸ್ ನೀಡಬೇಕು.ರಾಜ್ಯ ಪೌರ ಕಾರ್ಮಿಕರಿಗೆ 2,000 ಕೋಟಿ ರೂ. ಸಂಕಷ್ಟ ಪರಿಹಾರ ನಿಧಿ ಕೊಡಲು ಒಪ್ಪಿಗೆ.
6. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 65.05 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ
7. ಯಾದಗಿರಿ ಜಿಲ್ಲೆಯ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 2,540 ಕೋಟಿ ರೂ., ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ 115 ಕೋಟಿ ರೂ., ತಿಪಟೂರು ಕ್ಷೇತ್ರಕ್ಕೆ 430 ಕೋಟಿ ರೂ., ಹಾವೇರಿ ಜಿಲ್ಲೆಯ 285 ಗ್ರಾಮಗಳಿಗೆ 834 ಕೋಟಿ ರೂ. ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ.
ಇದನ್ನೂ ಓದಿ | ಚುನಾವಣೆಗೆ ʻನಮ್ಮ ಕ್ಲಿನಿಕ್ʼ ಟ್ರಂಪ್ ಕಾರ್ಡ್: ರಾಜ್ಯಾದ್ಯಂತ ತಲೆಯೆತ್ತಲಿವೆ ಸರ್ಕಾರಿ ಚಿಕಿತ್ಸಾಲಯ
ಭಕ್ತವತ್ಸಲ ಕಮಿಟಿ ವರದಿಯ ನಂತರ ತೀರ್ಮಾನ
ಒಬಿಸಿ ಸಮುದಾಯಗಳಿಗೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕುರಿತು ಅಧ್ಯಯನ ನಡೆಸಲು ರಚಿಸಿರುವ ಭಕ್ತವತ್ಸಲ ಸಮಿತಿ ವರದಿ ನಂತರ ತೀರ್ಮಾನಿಸಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ನಂತರ ಶೀಘ್ರದಲ್ಲಿ ಪರಿಗಣಿಸುತ್ತೇವೆ. ಪಂಚಮಸಾಲಿ ಮೀಸಲಾತಿ ವಿಚಾರವೂ ಒಬಿಸಿ ಮೀಸಲಾತಿ ಅಡಿಯಲ್ಲೇ ಬರುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.
ದತ್ತಪೀಠದ ವಿವಾದ ಪರಿಹಾರ ಮಾಡುವ ಕುರಿತು ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಸಮಸ್ಯೆ ಪರಿಹಾರಕ್ಕೆ ರಚಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿಯ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚನೆ ಮಾಡಲಾಗಿತ್ತು. ಉಪಸಮಿತಿ ಕೊಟ್ಟಿರುವ ವರದಿಯ ಕುರಿತು ಹೈಕೋರ್ಟ್ ಮುಂದೆ ಪ್ರಮಾಣಪತ್ರ ಹಾಕಲು ತಿರ್ಮಾನ ಮಾಡಲಾಗಿದೆ ಎಂದರು.