ಮಂಜುನಾಥ ಅಶೋಕ್ ಹುಡೇದ, ಬೆಳಗಾವಿ
ರಾಜ್ಯ ರಾಜಕಾರಣದ ಮಟ್ಟಿಗೆ ಕುಂದಾನಗರಿ ಬೆಳಗಾವಿ ಸಹ ಒಂದು ಶಕ್ತಿ ಕೇಂದ್ರ. ಈ ಕಾರಣಕ್ಕೆ ಇದನ್ನು ರಾಜ್ಯದ ಎರಡನೇ ರಾಜಧಾನಿ ಎಂದೂ ಕರೆಯುತ್ತಾರೆ. ಅಲ್ಲದೆ, ಉತ್ತರ ಕರ್ನಾಟಕಕ್ಕೆ ಆಡಳಿತ ಪ್ರಾತಿನಿಧ್ಯವನ್ನು ಕೊಡುವ ನಿಟ್ಟಿನಲ್ಲಿ ಇಲ್ಲಿ ಸುವರ್ಣ ವಿಧಾನಸೌಧವನ್ನೂ ಸ್ಥಾಪನೆ ಮಾಡಲಾಗಿದೆ. ಜತೆಗೆ ಇಲ್ಲಿನ ರಾಜಕಾರಣಿಗಳೂ ಸಹ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ವೇಳೆ ಇಲ್ಲಿ ಮಹಿಳಾ ರಾಜಕಾರಣಿಗಳ ಪಾರುಪತ್ಯವೂ ಇದ್ದು, ಮೊದಲ ಹಾಗೂ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಸಚಿವ ಸ್ಥಾನವನ್ನು ಪಡೆದವರೂ ಇದ್ದಾರೆ. ಈ ಬಾರಿ ಎರಡನೇ ಸಲಕ್ಕೆ ಆಯ್ಕೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ರಾಜಕೀಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ. ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಸದ್ಯಕ್ಕೆ ಇಬ್ಬರು ಮಹಿಳಾ ಶಾಸಕಿಯರಿದ್ದಾರೆ. ನಿಪ್ಪಾಣಿ ಕ್ಷೇತ್ರದ ಶಶಿಕಲಾ ಜೊಲ್ಲೆ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಲಕ್ಷ್ಮೀ ಹೆಬ್ಬಾಳ್ಕರ್ ಹಾಲಿ ಶಾಸಕರಾಗಿದ್ದಾರೆ. ಕಳೆದ ಬಾರಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದರೆ, ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಮಂತ್ರಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಿಂದ ಸಚಿವೆ ಆಗುತ್ತಿರುವ ಮೂರನೇ ಶಾಸಕಿ!
ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕೆಲವು ಮನೆತನಗಳು ಇಂದಿಗೂ ಖ್ಯಾತಿಯನ್ನು ಪಡೆದುಕೊಂಡಿವೆ. ಸರ್ಕಾರವನ್ನೇ ಬೀಳಿಸುವಷ್ಟರ ಮಟ್ಟಿಗೆ ಪ್ರಾಬಲ್ಯ ಹೊಂದಿರುವ ಮನೆತನಗಳು ಇಲ್ಲಿವೆ. ಈ ಹಿಂದೆ ಹಿಂದೆ ವಿ.ಎಲ್. ಪಾಟೀಲ್ ಕುಟುಂಬ, ಕತ್ತಿ ಕುಟುಂಬ, ಸದ್ಯ ಜಾರಕಿಹೊಳಿ ಕುಟುಂಬವು ಈಗಲೂ ಜಿಲ್ಲಾ ರಾಜಕೀಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡಿಲ್ಲ. ಈ ಫ್ಯಾಮಿಲಿ ಫೈಟ್, ಪ್ರತಿಷ್ಠೆಯ ಕಣದ ನಡುವೆಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಲಕ್ಷ್ಮೀ ಹೆಬ್ಬಾಳಕರ್ ಗೆದ್ದು ಬೀಗಿದ್ದಾರೆ. ಲಿಂಗಾಯತ ಕೋಟಾದಡಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರ ಸಂಪುಟ ಸೇರಿದ್ದಾರೆ.
ಬೆಳಗಾವಿಯಿಂದ ನೀರಾವರಿ ಸಚಿವರಾಗಿದ್ದ ಲೀಲಾವತಿ ಆರ್ ಪ್ರಸಾದ್
ಲೀಲಾವತಿ ಆರ್ ಪ್ರಸಾದ್ ಅವರು ಅಥಣಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. 1985 ಮತ್ತು 1994ರಲ್ಲಿ ಅಥಣಿಯಿಂದ ಜನತಾದಳದಿಂದ ಸ್ಪರ್ಧೆ ಮಾಡಿ ಗೆದ್ದು ಬೀಗಿದ್ದರು. ಅಲ್ಲದೆ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದ ಲೀಲಾವತಿ ಆರ್. ಪ್ರಸಾದ್ ಅವರು ದೇವೆಗೌಡರ ಸರ್ಕಾರದಲ್ಲಿ ಮೊದಲ ಮಹಿಳಾ ನೀರಾವರಿ ಮಂತ್ರಿಯಾಗಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದು ಈಗ ಇತಿಹಾಸ. ತಮ್ಮ 23ನೇ ವಯಸ್ಸಿಗೆ (ಅಂದಿನ ಬೆಂಗಳೂರು ಸಿಟಿ ಕಾರ್ಪೊರೇಷನ್) ಇಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿಯೂ ಸಹ ಲೀಲಾವತಿ ಆರ್. ಪ್ರಸಾದ್ ಅವರು ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ಎರಡನೇ ಬಾರಿ ಗೆದ್ದಾಗಲೇ ಶಶಿಕಲಾ ಜೊಲ್ಲೆ ಮಂತ್ರಿ
ನಿಪ್ಪಾಣಿ ಕ್ಷೇತ್ರದಿಂದ 2013ರಲ್ಲಿ ಚುನಾವಣೆ ಎದುರಿಸಿ ಗೆದ್ದು ಬೀಗಿದ್ದ ಶಶಿಕಲಾ ಜೊಲ್ಲೆ 2018ರಲ್ಲಿಯೂ ಶಾಸಕರಾಗಿ ಮರು ಆಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದರು. 2018 ರಲ್ಲಿ ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬಂತು. ಅದಾದ ನಂತರ 17 ಜನ ಶಾಸಕರು ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು ಸರ್ಕಾರ ಕಡೆವಿದ್ದರು. ಬಳಿಕ ಅಸ್ವಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಆಯ್ಕೆ ಆಗಿದ್ದರು. ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದ ಮೇಲೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಲೂ ಮುಜರಾಯಿ ಹಾಗೂ ವಕ್ಫ್ ಸಚಿವೆಯಾಗಿಯೂ ಜೊಲ್ಲೆ ಕೆಲಸ ಮಾಡಿದ್ದರು.