ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ (Karnataka Cabinet expansion) ಆಗಿದ್ದು, ಶನಿವಾರ (ಮೇ 27) 24 ಮಂದಿ ಸೇರ್ಪಡೆಯಾಗುವ ಮೂಲಕ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ನಾಯಕರು ಸೇರಿದಂತೆ ಹಲವು ಕಾರಣಗಳಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜಭವನದ ಮುಂದೆ ಹಲವು ರಾಜಕೀಯ ನಾಯಕರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಎಂ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯಕ್ಕಂತೂ ಯಾರಿಗೂ ಸ್ಥಾನ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದ್ದು, ಇವರನ್ನು ಸಮಾಧಾನ ಪಡಿಸುವ ಪ್ರಯತ್ನಗಳೂ ಕಾಣುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ರಾಜಭವನ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ
ಕಾಂಗ್ರೆಸ್ ಪಕ್ಷಕ್ಕೆ ನಮ್ಮ ನಾಯಕರಾದ ಎಂ. ಕಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರು ನಿಷ್ಠಾವಂತರಾಗಿದ್ದರೂ ಅವರಿಗೆ ಸಚಿವ ಸ್ಥಾನ ಲಭ್ಯವಾಗಿಲ್ಲ. ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮೋಸ ಮಾಡಿದೆ. ಶುಕ್ರವಾರದ ವರೆಗೂ ಸಚಿವ ಸ್ಥಾನದ ಪಟ್ಟಿಯಲ್ಲಿ ಅವರ ಹೆಸರುಗಳು ಇದ್ದವು. ಆದರೆ, ಇದ್ದಕ್ಕಿದ್ದಂತೆ ಬದಲಾವಣೆ ಆಗಿದೆ. ಎಂ.ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರವರ ಬೆಂಬಲಿಗರು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮಡಿಕೇರಿಗೆ ಅನ್ಯಾಯ- ಎ.ಎಸ್. ಪೊನ್ನಣ್ಣ
ಮಡಿಕೇರಿಗೆ ಅನ್ಯಾಯವಾಗಿದೆ. ತುಂಬ ವರ್ಷಗಳಿಂದ ಅನ್ಯಾಯವಾಗುತ್ತಾ ಬಂದಿದೆ. ದಿನೇಶ್ ಗುಂಡೂರಾವ್ ತಂದೆ ಸಿಎಂ ಆಗಿದ್ದನ್ನು ಬಿಟ್ಟರೆ ಬೇರೆ ಯಾರಿಗೂ ಪ್ರಾತಿನಿಧ್ಯ ಸಿಗಲಿಲ್ಲ. ಯಾವುದೇ ಸರ್ಕಾರ ಬಂದರೂ ಪ್ರಾತಿನಿಧ್ಯ ಸಿಗಲಿಲ್ಲ. ಇದು ನನಗೆ ತೀವ್ರ ನೋವು ತಂದಿದೆ ಎಂದು ಎ.ಎಸ್. ಪೊನ್ನಣ್ಣ ಹೇಳಿಕೆ ನೀಡಿದ್ದಾರೆ.
ಪುಟ್ಟರಂಗ ಶೆಟ್ಟಿ ಅಸಮಾಧಾನ
ಹೈಕಮಾಂಡ್ ನಿರ್ಧಾರ ಮಾಡಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೆ. ಕೊನೆಯ ಕ್ಷಣದವರೆಗೂ ನನ್ನ ಹೆಸರು ಇತ್ತು. ಯಾರ ಕೈವಾಡ ಇದಿಯೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ನಿರ್ಧಾರ ಮಾಡುತ್ತೇನೆ. ನನಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ಇಷ್ಟವಿಲ್ಲ. ಏಕೆ? ಏನಾಯಿತು? ಅಂತ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿರ್ಧಾರ ಮಾಡುತ್ತೇನೆ. ನಿನಗೆ ಸ್ಥಾನ ಫೈನಲ್ ಆಗಿದೆ. ವಾಪಸ್ ಹೋಗು ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾವ ಕಾರಣಕ್ಕೆ ನನಗೆ ಸ್ಥಾನ ತಪ್ಪಿತು ಅನ್ನೋದು ಗೊತ್ತಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ಲಮಾಣಿ ಸಮುದಾಯವನ್ನು ಕಡೆಗಣಿಸಿದ್ದಾರೆ- ರುದ್ರಪ್ಪ ಲಮಾಣಿ
ನಮ್ಮ ಸಮುದಾಯದಿಂದ ನಾನು ಒಬ್ಬನೇ ಗೆದ್ದಿದ್ದೇನೆ. ಬಿಜೆಪಿ, ಜೆಡಿಎಸ್ ಸೇರಿ ಯಾವುದೇ ಪಕ್ಷ ಆದರೂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುತ್ತಿದ್ದರು. ಲಮಾಣಿ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಶಾಸಕ ರುದ್ರಪ್ಪ ಲಮಾಣಿ ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Weather report: ಬೆಂಗಳೂರಲ್ಲಿ ತಣ್ಣಗಾದ ವರುಣ; ಕರಾವಳಿ ಸೇರಿ ಇತರ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಕಾಂಗ್ರೆಸ್ ಪಕ್ಷ ಸಮುದಾಯ ಹಾಗೂ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಭೇಟಿ ವೇಳೆಯಲ್ಲಿ ನಿಮ್ಮ ಹೆಸರು ಸಚಿವರ ಪಟ್ಟಿಯಲ್ಲಿದೆ ಎಂದು ಹೇಳಿದ್ದರು. ಹೈಕಮಾಂಡ್ ನಾಯಕರು ಸಹ ಹೇಳಿದ್ದರು. ನಿಮ್ಮ ಸಮುದಾಯದಿಂದ ನಿಮ್ಮೊಬ್ಬರ ಗೆಲುವು ಆಗಿದೆ. ನಿಮಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದ್ದರು. ಆದರೆ, ಈಗ ಪಟ್ಟಿಯಲ್ಲಿ ನೋಡಿದಾಗ ನನ್ನ ಹೆಸರು ಇರಲಿಲ್ಲ. ನನಗೆ ಬೇಸರ ಆಗಿದೆ, ಸಿಎಂ ಹಾಗೂ ಡಿಸಿಎಂರನ್ನು ಭೇಟಿ ಮಾಡಿದ್ದೇನೆ. ಭೇಟಿ ವೇಳೆಯಲ್ಲಿ ನಿನಗೆ ಅನ್ಯಾಯ ಆಗಿದೆ, ಮುಂದೆ ಸರಿ ಮಾಡೋಣ ಎಂದು ಹೇಳಿದ್ದಾರೆ ಎಂದು ರುದ್ರಪ್ಪ ಲಮಾಣಿ ಹೇಳಿದ್ದಾರೆ.