ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಹೊಸ ಸಚಿವರಿಗೆ ಖಾತೆ ಹಂಚಿಕೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ. ಅದರ ನಡುವೆ ಮುಂದಿನ ಹಂತದ ಸಂಪುಟ ವಿಸ್ತರಣೆಯೂ (Karnataka Cabinet) ವಿಳಂಬವಾಗುವ ಸಾಧ್ಯತೆ ಕಂಡುಬಂದಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದಿದ್ದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿ ಪ್ರಮಾಣವಚನ ಸ್ವೀಕಾರ ವಿಳಂಬವಾಗಿತ್ತು. ಸಿಎಂ ಪದಗ್ರಹಣದ ಸಂದರ್ಭದಲ್ಲೇ 28 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಾರಿಗೆ ಮಂತ್ರಿಗಿರಿ ಕೊಡಬೇಕು ಎಂಬ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಭಿಪ್ರಾಯಭೇದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇವಲ ಎಂಟು ಸಚಿವರ ನೇಮಕಕ್ಕೆ ಸೀಮಿತವಾಯಿತು. ಇದೀಗ ಈ ಸಚಿವರಿಗೂ ತಕ್ಷಣ ಖಾತೆ ಭಾಗ್ಯ ಸಿಗುವ ಸಾಧ್ಯತೆ ಕಾಣುತ್ತಿಲ್ಲ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಖಾತೆಯನ್ನು ನಿರ್ಧರಿಸುವುದು ಯಾವಾಗ ಎನ್ನುವ ಬಗ್ಗೆ ರಣದೀಪ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಒಂದು ಹಂತದ ಚರ್ಚೆಯಾಗಿದೆ ಎನ್ನಲಾಗಿದೆ. ಇದರ ಪ್ರಕಾರ, ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆಯ ಬಳಿಕವೇ ಖಾತೆ ಹಂಚಿಕೆ ನಡೆಯಲಿದೆ.
ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆ ಯಾವಾಗ?
ಈ ನಡುವೆ ಮುಂದಿನ ಸುತ್ತಿನ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಯೂ ಚರ್ಚೆಯಲ್ಲಿದೆ. ಯಾಕೆಂದರೆ, ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭಾ ಅಧಿವೇಶನ ನಡೆಯಲಿದೆ. ಸೋಮವಾರ, ಮಂಗಳವಾರ, ಬುಧವಾರ ಎಲ್ಲರೂ ಅಧಿವೇಶನದಲ್ಲಿ ಬ್ಯುಸಿಯಾಗಿರುವುದರಿಂದ ಗುರುವಾರದ ಬಳಿಕವಷ್ಟೇ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಯಲಿದೆ.
ಅಂದರೆ ಸಂಪುಟ ವಿಸ್ತರಣೆಯ ಚರ್ಚೆ ಆರಂಭವಾಗುವುದೇ ವಾರಾಂತ್ಯದಲ್ಲಿ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಗುರುವಾರದ ಬಳಿಕ ದಿಲ್ಲಿಗೆ ತೆರಳಲಿದ್ದಾರೆ. ಆದರೆ, ಅಲ್ಲಿಗೆ ಬರುವಾಗ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಸಾಧ್ಯವಾದಷ್ಟು ನಿವಾರಿಸಿಕೊಂಡು ಬರುವಂತೆ ಸೂಚಿಸಲಾಗಿದೆ.
ಬಾಕಿ ಉಳಿದ 20 ಸಚಿವರ ನೇಮಕಕ್ಕೆ ಅನುಕೂಲವಾಗುವಂತೆ ಪಟ್ಟಿಯನ್ನು ಹಿಡಿದುಕೊಂಡು ಬರುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಕೆಲವೊಂದು ಹೆಸರುಗಳ ಬಗ್ಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿತ್ತು. ಅದನ್ನು ಸರಿಮಾಡಿಕೊಂಡೇ ಬರುವಂತೆ ತಿಳಿಸಲಾಗಿದೆ.
ಅದರ ಜತೆಗೆ ಎಲ್ಲಾ 30 ಸಚಿವರ ಖಾತೆ ಹಂಚಿಕೆಗೆ ಸಂಬಂಧಿಸಿಯೂ ಸಲಹೆಗಳನ್ನು ತರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ : Karnataka CM: ಸಿದ್ದರಾಮಯ್ಯ ಪಟ್ಟಾಭಿಷೇಕ ವೈಭವ ಹೇಗಿತ್ತು? ಚಿತ್ರಗಳಲ್ಲಿ ನೋಡಿ