ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ (Karnataka Cabinet expansion) ಮಾಡಿದ್ದು, 2ನೇ ಹಂತದಲ್ಲಿ 24 ಮಂದಿಯ ಸೇರ್ಪಡೆಯಾಗಿದೆ. ಇವರಲ್ಲಿ ಸೇರ್ಪಡೆಯಾದವರು ಖುಷಿಪಟ್ಟರೆ, ಶಾಸಕರಾದ ಪುಟ್ಟರಂಗ ಶೆಟ್ಟಿ ಹಾಗೂ ರುದ್ರಪ್ಪ ಲಮಾಣಿ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಯಾವ ಕಾರಣಕ್ಕೆ ನನಗೆ ಸ್ಥಾನ ತಪ್ಪಿತು ಅನ್ನೋದು ಗೊತ್ತಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅಸಮಾಧಾನ ಹೊರಹಾಕಿದ್ದರೆ, ಕಾಂಗ್ರೆಸ್ ಪಕ್ಷ ಸಮುದಾಯ ಹಾಗೂ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಭೇಟಿ ವೇಳೆಯಲ್ಲಿ ನಿಮ್ಮ ಹೆಸರು ಸಚಿವರ ಪಟ್ಟಿಯಲ್ಲಿದೆ ಎಂದು ಆಕ್ರೋಶಗೊಂಡಿದ್ದಾರೆ.
ನಾನು ಎಲ್ಲಿಯೂ ಲಾಬಿ ಮಾಡಿಲ್ಲ- ಶಾಸಕ ಮಂಕಾಳು ವೈದ್ಯ
ಸಚಿವ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ನಾನು ಎಲ್ಲಿಯೂ ಲಾಬಿ ಮಾಡಿಲ್ಲ. ಮನವಿ ಮಾಡಿದ್ದೆನಷ್ಟೇ ಅದು ಬಿಟ್ಟು ಯಾವುದೇ ಲಾಬಿ ಮಾಡಿಲ್ಲ. ಈಗಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ತಂದಿದ್ದೇವೆ. ಇನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರದೇ ಇರುತ್ತೇವೆಯೇ? ಆರ್.ವಿ. ದೇಶಪಾಂಡೆ ಹಾಗೂ ನನ್ನ ಜತೆ ಯಾವುದೇ ಸಮಸ್ಯೆ ಇಲ್ಲ. ಅವರೇ ನನಗೆ ಸಚಿವ ಸ್ಥಾನ ಕೊಡಿಸಿರುವುದು. ಈಗ ಸಚಿವ ಸ್ಥಾನ ಸಿಕ್ಕಿದ್ದು, ಸಾಧನೆ ಮಾಡುತ್ತೇನೆ ಎಂದು ಶಾಸಕ ಮಂಕಾಳು ವೈದ್ಯ ಹೇಳಿದರು.
ನಾನು ಹೈಕಮಾಂಡ್, ಸಿದ್ದರಾಮಯ್ಯ, ಡಿಕೆಶಿ ಕೋಟಾದಲ್ಲಿ ಬಂದಿದ್ದೇನೆ- ಖಂಡ್ರೆ
ಈ ಬಗ್ಗೆ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ನನ್ನ ಸಂಘಟನೆ ಗುರುತಿಸಿ ಅವಕಾಶ ನೀಡಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನಗೆ ಅವಕಾಶ ನೀಡಿದ್ದಾರೆ. ಯಾವುದೇ ಇಲಾಖೆ ಕೊಟ್ಟರೂ ನಿಭಾಯಿಸುತ್ತೇನೆ. ಸ್ವಂತ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ನಾನು ಹೈಕಮಾಂಡ್, ಸಿದ್ದರಾಮಯ್ಯ, ಡಿಕೆಶಿ ಕೋಟಾದಲ್ಲಿ ಬಂದಿದ್ದೇನೆ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಅನ್ಯಾಯ ಆಗಿಲ್ಲ. ಅವರನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದೆವು. ಸವದಿ ಗೆದ್ದಿದ್ದು, ಮುಂದಿನ ದಿನಗಳಲ್ಲಿ ಮಂತ್ರಿ ಆಗುತ್ತಾರೆ. ಶೆಟ್ಟರ್ ಅವರನ್ನು ಸಹ ಗುರುತಿಸಿದ್ದೇವೆ. ನನ್ನ ಸಂಘಟನೆ, ನಿಷ್ಠೆ ನೋಡಿ ಕಾಂಗ್ರೆಸ್ ಹೈಕಮಾಂಡ್ ನನಗೆ ಅವಕಾಶ ನೀಡಿದೆ ಎಂದು ಹೇಳಿದರು.
ಹೈಕಮಾಂಡ್ ಗುರುತಿಸಿ ಕೊಟ್ಟಿದೆ- ಶಿವನಾಂದ ಪಾಟೀಲ್
ರಾಹುಲ್ ಗಾಂಧಿ ಅವರಿಗೆ ಜಿಲ್ಲೆಯಲ್ಲಿ ನನ್ನ ಶಕ್ತಿ ಏನು ಅಂತ ಗೊತ್ತು. ನಾನು ಯಾವುದೇ ಲಾಬಿ ಮಾಡಿಲ್ಲ. ಹೈಕಮಾಂಡ್ ಗುರುತಿಸಿ ಅವಕಾಶ ಕೊಟ್ಟಿದೆ. ನಾನು ಈ ಹಿಂದೆ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೇನೆ. ನಗರಾಭಿವೃದ್ಧಿ ಮತ್ತು ಸಹಕಾರದಲ್ಲಿ ನನಗೆ ಅನುಭವವಿದೆ. ನಮ್ಮ ಜಿಲ್ಲೆಯ ನಾಯಕರು ಸ್ಥಾನ ತಪ್ಪಿಸಲು ಪ್ರಯತ್ನ ಮಾಡಿದ್ದರು. ಇನ್ನು ಮುಂದೆಯಾದರೂ ಅವರು ತಿದ್ದಿಕೊಳ್ಳಲಿ. ನನ್ನ ಸಾಮರ್ಥ್ಯ ಏನು ಎಂಬುದು ನಮ್ಮ ಜಿಲ್ಲೆಯ ನಾಯಕರಿಗೂ ಗೊತ್ತು. ಹೈಕಮಾಂಡ್‌ಗೂ ಗೊತ್ತು. ತಪ್ಪು ತಿದ್ದಿಕೊಂಡು ಜಿಲ್ಲೆಯ ನಾಯಕರು ನಡೆಯಲಿ ಎಂದು ಶಾಸಕ ಶಿವನಾಂದ ಪಾಟೀಲ್ ಹೇಳುವ ಮೂಲಕ ಸಚಿವ ಎಂ.ಬಿ. ಪಾಟೀಲ್‌ಗೆ ಪರೋಕ್ಷ ಎಚ್ಚರಿಕೆ ನೀಡಿದರು.
ನಾನು ಯಾವ ಕೋಟಾದಲ್ಲೂ ಇಲ್ಲ. ಹೈಕಮಾಂಡ್ ಕೋಟಾ ಅಷ್ಟೇ. ಕಳೆದ ಬಾರಿ ನನಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದರು. ಈ ಬಾರಿ ವಿಜಯಪುರ ಉಸ್ತುವಾರಿ ಬೇಕು ಎಂದು ಶಿವನಾಂದ ಪಾಟೀಲ್ ಹೇಳಿದರು.
ಪುಟ್ಟರಂಗ ಶೆಟ್ಟಿ ಅಸಮಾಧಾನ
ಹೈಕಮಾಂಡ್ ನಿರ್ಧಾರ ಮಾಡಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೆ. ಕೊನೆಯ ಕ್ಷಣದವರೆಗೂ ನನ್ನ ಹೆಸರು ಇತ್ತು. ಯಾರ ಕೈವಾಡ ಇದಿಯೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ನಿರ್ಧಾರ ಮಾಡುತ್ತೇನೆ. ನನಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ಇಷ್ಟವಿಲ್ಲ. ಏಕೆ? ಏನಾಯಿತು? ಅಂತ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿರ್ಧಾರ ಮಾಡುತ್ತೇನೆ. ನಿನಗೆ ಸ್ಥಾನ ಫೈನಲ್ ಆಗಿದೆ. ವಾಪಸ್ ಹೋಗು ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಯಾವ ಕಾರಣಕ್ಕೆ ನನಗೆ ಸ್ಥಾನ ತಪ್ಪಿತು ಅನ್ನೋದು ಗೊತ್ತಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ಲಮಾಣಿ ಸಮುದಾಯವನ್ನು ಕಡೆಗಣಿಸಿದ್ದಾರೆ- ರುದ್ರಪ್ಪ ಲಮಾಣಿ
ನಮ್ಮ ಸಮುದಾಯದಿಂದ ನಾನು ಒಬ್ಬನೇ ಗೆದ್ದಿದ್ದೇನೆ. ಬಿಜೆಪಿ, ಜೆಡಿಎಸ್ ಸೇರಿ ಯಾವುದೇ ಪಕ್ಷ ಆದರೂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುತ್ತಿದ್ದರು. ಲಮಾಣಿ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಶಾಸಕ ರುದ್ರಪ್ಪ ಲಮಾಣಿ ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Weather report: ಬೆಂಗಳೂರಲ್ಲಿ ತಣ್ಣಗಾದ ವರುಣ; ಕರಾವಳಿ ಸೇರಿ ಇತರ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಕಾಂಗ್ರೆಸ್ ಪಕ್ಷ ಸಮುದಾಯ ಹಾಗೂ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಭೇಟಿ ವೇಳೆಯಲ್ಲಿ ನಿಮ್ಮ ಹೆಸರು ಸಚಿವರ ಪಟ್ಟಿಯಲ್ಲಿದೆ ಎಂದು ಹೇಳಿದ್ದರು. ಹೈಕಮಾಂಡ್ ನಾಯಕರು ಸಹ ಹೇಳಿದ್ದರು. ನಿಮ್ಮ ಸಮುದಾಯದಿಂದ ನಿಮ್ಮೊಬ್ಬರ ಗೆಲುವು ಆಗಿದೆ. ನಿಮಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದ್ದರು. ಪಟ್ಟಿಯಲ್ಲಿ ನೋಡಿದಾಗ ನನ್ನ ಹೆಸರು ಇರಲಿಲ್ಲ. ನನಗೆ ಬೇಸರ ಆಗಿದೆ, ಸಿಎಂ ಹಾಗೂ ಡಿಸಿಎಂರನ್ನು ಭೇಟಿ ಮಾಡಿದ್ದೆ. ಭೇಟಿ ವೇಳೆಯಲ್ಲಿ ನಿನಗೆ ಅನ್ಯಾಯ ಆಗಿದೆ, ಮುಂದೆ ಸರಿ ಮಾಡೋಣ ಎಂದು ಹೇಳಿದ್ದಾರೆ ಎಂದು ರುದ್ರಪ್ಪ ಲಮಾಣಿ ಹೇಳಿದ್ದಾರೆ.