ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ (Karnataka Cabinet expansion) ಆಗಿದ್ದು, ಶನಿವಾರ (ಮೇ 27) 24 ಮಂದಿ ಸೇರ್ಪಡೆಯಾಗುವ ಮೂಲಕ ಎಲ್ಲ 34 ಸ್ಥಾನಗಳೂ ಭರ್ತಿಯಾಗಿವೆ. ಇದು ಈಗ ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದ್ದು, ಆಕಾಂಕ್ಷಿತ ನಾಯಕರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ವೇಳೆ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಐವರು ಶಾಸಕರು ಆಯ್ಕೆಯಾಗಿದ್ದರೂ ಒಬ್ಬರಿಗೂ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಎಲ್ಲರೂ ಮುನಿಸಿಕೊಂಡಿದ್ದು, ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿ ತಮ್ಮ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.
ಬೆಂಬಲಿಗರ ಒತ್ತಡಕ್ಕೆ ಮಣಿದ ಐವರು ಶಾಸಕರು
ಸಚಿವ ಸಂಪುಟದಲ್ಲಿ ಹಾವೇರಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹಾವೇರಿ ಜಿಲ್ಲೆಯ 5 ಐವರು ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ ಅವರು ದೂರ ಉಳಿದಿದ್ದಾರೆ. ತಮಗೆ ಸ್ಥಾನ ಸಿಗದೆ ಇರುವುದಕ್ಕೆ ತೀವ್ರ ಬೇಸರ ಹೊರಹಾಕಿರುವ ಈ ನಾಯಕರು, ಬೆಂಗಳೂರಿನಿಂದ ಹಾವೇರಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ಬಿಟ್ಟು ತಮ್ಮ ಕ್ಷೇತ್ರಗಳತ್ತ ಇವರೆಲ್ಲರೂ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಿದ್ದರಾಮಯ್ಯ ಸಂಪುಟದಲ್ಲಿ ಸಿಗದ ಸ್ಥಾನ; ಅಸಮಾಧಾನ ಸ್ಫೋಟ
ಹಾವೇರಿ ಬಿಜೆಪಿ ಭದ್ರಕೋಟೆಯಾಗಿದ್ದರೂ 5 ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಆದರೂ ಇವರಿಗೆ ಪ್ರಾತಿನಿಧ್ಯ ಸಿಗದ ಕಾರಣ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಲ್ಲದೆ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಾಸಕರು ಗೈರಾಗುವಂತೆ ಆಗ್ರಹಿಸಿದ್ದರು. ಹೀಗಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಬೆಂಗಳೂರಿನಿಂದ ನಿರ್ಗಮಿಸಿದ್ದಾರೆ.
ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಬೆಂಬಲಿಗರ ಆಕ್ರೋಶ
ಸಚಿವ ಸಂಪುಟದಲ್ಲಿ ಉಪ್ಪಾರ ಸಮುದಾಯವನ್ನು ಕಡೆಗಣನೆ ಮಾಡಲಾಗಿದೆ ಎಂದು ಚಾಮರಾಜನಗರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಾರ ಸಮುದಾಯ ಮುಖಂಡರು ಆಕ್ರೋಶ ಹೊರಹಾಕಿದ್ದು, ನಾಲ್ಕು ಬಾರಿ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ಕೊಡದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಮಳವಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ನರೇಂದ್ರ ಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪಿ.ಎಂ. ನರೇಂದ್ರ ಸ್ವಾಮಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ ವ್ಯಕ್ತಪಡಿಸಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ತನ್ವೀರ್ ಸೇಠ್ ಬೆಂಬಲಿಗರಿಂದ ಪ್ರತಿಭಟನೆ
ಶಾಸಕ ತನ್ವೀರ್ ಸೇಟ್‌ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ. ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಲಾಗಿದೆ. ತನ್ವೀರ್ ಸೇಠ್ ಹಳೇ ಮೈಸೂರು ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Karnataka Cabinet expansion: ಸಂಪುಟದಲ್ಲಿನ್ನು ಸೀಟಿಲ್ಲ; ನಾಯಕರ, ಬೆಂಬಲಿಗರ ಆಕ್ರೋಶಕ್ಕೆ ಬೆಲೆ ಇಲ್ಲ
ಟಿ. ರಘುಮೂರ್ತಿಗೆ ಸಚಿವ ಸ್ಥಾನ ನೀಡಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ವಿಜಯಸೇನೆ ವತಿಯಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಮುಖಂಡರು ರಕ್ತದಲ್ಲಿ ಪತ್ರ ಬರೆದು ಆಕ್ರೋಶವನ್ನು ಹೊರಹಾಕಿದ್ದಾರೆ. ವಿಜಯಸೇನೆ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಕುಳಿತು ಘೋಷಣೆ ಕೂಗಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ಅವರಿಗೆ ಸಚಿವ ಸ್ಥಾನ ಕೊಡದೇ ಇರುವುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ.