ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳು ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತಲೆ ನೋವು ತಂದಿಟ್ಟಿವೆ. ರಾಜ್ಯದ ಹಲವು ಕಡೆ ವಿದ್ಯುತ್ ಬಿಲ್ ಕಟ್ಟಲು, ಬಸ್‌ಗಳಲ್ಲಿ ಟಿಕೆಟ್ ಹಣ ಕೊಡಲು ನಾಗರಿಕರು ಮುಂದಾಗಿದ್ದಾರೆ. ಗ್ಯಾರಂಟಿ ಕೊಡುವ ಬದಲು ಕೈ ಕೊಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಲೇವಡಿ ಮಾಡಿವೆ.
ಹೀಗಾಗಿ ಷರತ್ತುಪೂರ್ವಕವಾಗಿ ಗ್ಯಾರಂಟಿಗಳನ್ನು ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಗ್ಯಾರೆಂಟಿ ಸ್ಕೀಮ್ ಜಾರಿಗೆ ಷರತ್ತು ಕಡ್ಡಾಯ ಮಾಡಲು ಇಲಾಖಾವಾರು ಮಾಹಿತಿ ಪಡೆಯಲು ಸಿಎಂ ಮುಂದಾಗಿದ್ದಾರೆ. ಈಗಾಗಲೇ ಸಚಿವರಿಗೆ ಆಯಾ ಇಲಾಖೆಯ ಸಂಬಂಧ ಮಾಹಿತಿ ತರುವಂತೆ ಸೂಚನೆ ನೀಡಲಾಗಿದೆ.
ಎರಡು ಯೋಜನೆಗಳು ಜೂನ್ ತಿಂಗಳಿಂದ ಜಾರಿಯಾಗಲಿವೆ. ಅನ್ನಭಾಗ್ಯ ಮತ್ತು ಉಚಿತ ಕರೆಂಟ್ ಗ್ಯಾರೆಂಟಿ ಜಾರಿ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ಹಲವು ಷರತ್ತುಗಳನ್ನು ಹೂಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತರೇ ಮನೆ ಯಾಜಮಾನಿಯನ್ನು ಗುರುತಿಸಬೇಕು. ಆ ಮಾಹಿತಿಯನ್ನು ತಹಶೀಲ್ದಾರರಿಗೆ ನೀಡಬೇಕು. ತಹಶೀಲ್ದಾರರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊಡಬೇಕು.
ಬಿಪಿಎಲ್ ಕಾರ್ಡ್ ಕಡ್ಡಾಯ ಇರುವವರಿಗೆ ಮಾತ್ರ ಗೃಹಲಕ್ಷ್ಮಿ ಅನ್ವಯವಾಗಲಿದೆ. ಬಿಪಿಎಲ್ ಕಾರ್ಡ್ ಇದ್ದೂ ಈಗಾಗಲೇ ಸರ್ಕಾರದಿಂದ ಪೆನ್ಷನ್ ಪಡೆಯುತ್ತಿದ್ದರೆ ಅಂಥವರಿಗೆ ಇದು ಸಿಗುವುದಿಲ್ಲ. ವಿಧವಾ ವೇತನ ಅಥವಾ ಅಂಗವೈಕಲ್ಯತೆಯ ವೇತನ ಪಡೆಯುತ್ತಿದ್ದರೆ ಅಂಥವರಿಗೆ ಇಲ್ಲ. ಸರ್ಕಾರಿ ನೌಕರಿ ಪಡೆಯುತ್ತಿದ್ದರೆ, ಮನೆ ಬಾಡಿಗೆ ಬರುತ್ತಿದ್ದರೆ ಅಂಥವರಿಗೂ ಸಹ ಗೃಹಲಕ್ಷ್ಮೀ ಯೋಜನೆ ಸಿಗುವುದಿಲ್ಲ.
ಯುವನಿಧಿಗೂ ಕಂಡಿಷನ್
ಯುವನಿಧಿ ಗ್ಯಾರಂಟಿ ಯೋಜನೆ ಜಾರಿ ತಡವಾಗುವ ಸಾಧ್ಯತೆ ಇದೆ. ಯುವನಿಧಿ ಅಡಿ ಫಲಾನುಭವಿಗಳನ್ನು ಗುರುತಿಸುವ ಟಾರ್ಗೆಟ್ ಉನ್ನತ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಪಾಸ್ ಆದ ವಿಧ್ಯಾರ್ಥಿಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತದೆ.
ಕಳೆದ ವರ್ಷ (2022)ಕ್ಕೆ ಅನ್ವಯ ಆಗುವಂತೆ ಯುವನಿಧಿ ಜಾರಿ ಸಾಧ್ಯತೆ ಇದೆ. ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಕೊಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಫಲಾನುಭವಿ ಆಗಲೂ ಕುಟುಂಬದಲ್ಲಿ ಬಿಪಿಎಲ್ ಕಾರ್ಡ್ ಇರಬೇಕು. ತಂದೆ- ತಾಯಿ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಎಲ್ಲರಿಗೂ ಬಸ್ ಪಾಸ್ ಸಿಗಲ್ಲ!
ಬಸ್ ಪಾಸ್ ಫ್ರೀ ಎಂದು ಕೈ ನಾಯಕರು ಘೋಷಣೆ ಮಾಡಿದ ಪರಿಣಾಮ ಒಂದು ವಾರದಿಂದ ರಾಜ್ಯಾದ್ಯಂತ ಬಸ್‌ಗಳಲ್ಲಿ ಟಿಕೆಟ್ ಕಿರಿಕಿರಿ ಶುರುವಾಗಿದೆ. ಫ್ರೀ ಬಸ್ ಪಾಸ್ ಕೊಡುವ ಜವಾಬ್ದಾರಿ ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಹೆಂಗಸರಿಗೆ ಉಚಿತ ಬಸ್ ಪಾಸ್ ಕೊಡಬೇಕು. ಆದರೆ ಇದಕ್ಕೂ ಬಿಪಿಎಲ್ ಕಾರ್ಡ್ ಕಡ್ಡಾಯವಾಗಲಿದೆ ಎನ್ನಲಾಗಿದೆ. ಮಹಿಳೆಯರು ರಾಜ್ಯದವರೇ ಆಗಿರಬೇಕು. ನಿರ್ದಿಷ್ಟ ದೂರ ಸಂಚಾರ ಮಾತ್ರ ಉಚಿತ. ಸರ್ಕಾರಿ ಕೆಂಪು ಬಸ್ಸುಗಳಲ್ಲಿ ಮಾತ್ರ ಉಚಿತ. 50 ಕಿ.ಮೀ ಫ್ರೀ ಓಡಾಟಕ್ಕೆ ಅವಕಾಶ ಕೊಡುವ ಸಾಧ್ಯತೆ ಇದೆ.
ಮೇಲಿನ ಈ ಮೂರು ಯೋಜನೆ ಜಾರಿಗೆ ಇನ್ನೂ ಒಂದು ತಿಂಗಳ ಸಮಯ ಆಗಬಹುದು. ಆದರೆ ಮುಂದಿನ ಕ್ಯಾಬಿನೆಟ್‌ನಲ್ಲಿ ಅನ್ನಭಾಗ್ಯ ಮತ್ತು ಉಚಿತ ಕರೆಂಟ್ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.
ಇದನ್ನೂ ಓದಿ: congress guarantee: ಗ್ಯಾರಂಟಿಗಳ ಅನುಷ್ಠಾನವು ಸಿದ್ದರಾಮಯ್ಯ ಚೆಕ್‌ಗೆ ಸಹಿ ಹಾಕುವಷ್ಟು ಸುಲಭ ಅಲ್ಲ: ಸಚಿವ ಡಾ. ಸುಧಾಕರ್