Site icon Vistara News

Cabinet Meeting : ಸಾರಿಗೆ ನೌಕರರ ವೇತನ 15% ಹೆಚ್ಚಳ; ನೌಕರರ ಸಂಘಟನೆ ಒಪ್ಪುವುದೇ?

Transport salary

#image_title

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ವೇತನವನ್ನು (Employees salary) ಶೇಕಡಾ 15ರಷ್ಟು ಹೆಚ್ಚಿಸಲು ಜೂನ್‌ 16 (ಗುರುವಾರ) ನಡೆದ ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು 2023ರ ಏಪ್ರಿಲ್ ತಿಂಗಳಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ.

ರಾಜ್ಯ ಸಾರಿಗೆ ನೌಕರರ (Transport Employees) ಸಂಘ ಚುನಾವಣೆಗೆ ಮುನ್ನ ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಪಟ್ಟುಹಿಡಿದಿತ್ತು. ಆಗಿನ ಬಿಜೆಪಿ ಸರ್ಕಾರ ಶೇ. 14 ಮತ್ತು 17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿತ್ತು. ಆದರೆ, ನೌಕರರ ಸಂಘ ಶೇ. 25ಕ್ಕಿಂತ ಸ್ವಲ್ಪವೂ ಕಡಿಮೆಗೆ ಒಪ್ಪುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಮಾತುಕತೆ ಮುರಿದುಬಿದ್ದಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಶೇ. 15ರಷ್ಟು ವೇತನ ಹೆಚ್ಚಳ ಮಾಡಿರುವ ಕ್ರಮಕ್ಕೆ ನೌಕರರ ಸಂಘದ ಪ್ರತಿಕ್ರಿಯೆ ಏನು ಎನ್ನುವುದನ್ನು ಕಾದು ನೋಡಬೇಕಾಗಿದೆ.

ಸರ್ಕಾರಿ ನೌಕರರ ಸಂಘ ವೇತನ ಹೆಚ್ಚಳ ಮಾತ್ರವಲ್ಲ, ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು. ಇನ್ಸೆಟಿವ್ ಹೆಚ್ಚಳ, ಹಿಂದಿನ ಮುಷ್ಕರದ ಸಂದರ್ಭದಲ್ಲಿ ವಜಾ ಮಾಡಿದ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದು ಪ್ರಮುಖ ಬೇಡಿಕೆಗಳಲ್ಲಿ ಸೇರಿತ್ತು. ಇದೀಗ ಸಂಪುಟ ಸಭೆಯಲ್ಲಿ ಸದ್ಯಕ್ಕೆ ಕೇವಲ ವೇತನ ಹೆಚ್ಚಳದ ಬೇಡಿಕೆಯನ್ನು ಮಾತ್ರ ಪರಿಗಣಿಸಲಾಗಿದೆ.

ನಮಗೆ ಮಾತ್ರ ಕಡಿಮೆ ಯಾಕೆ?

ಬಿಜೆಪಿ ಸರ್ಕಾರದ ಕೊನೆಯ ದಿನಗಳಲ್ಲಿ ಸರ್ಕಾರಿ ನೌಕರರು, ಕೆಪಿಸಿಸಿಎಲ್‌ ನೌಕರರು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟವನ್ನೇ ಸಂಯೋಜಿಸಿದ್ದರು. ಪ್ರತಿಭಟನೆಗಳೇ ನಡೆದಿದ್ದವು. ನೌಕರರ ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ ಸರ್ಕಾರ ನೌಕರರ ವೇತನವನ್ನು ಶೇ. 17ರಷ್ಟು ಮತ್ತು ಕೆಪಿಟಿಸಿಎಲ್‌ ನೌಕರರ ವೇತವನ್ನು ಶೇ. 20ರಷ್ಟು ಹೆಚ್ಚಿಸಲು ನಿರ್ಧರಿಸಿತು. ಇದೇ ಹೊತ್ತಿಗೆ ಸಾರಿಗೆ ನೌಕರರು ಕೂಡಾ ಪ್ರತಿಭಟನೆಗೆ ಇಳಿದು ಬಸ್‌ ಬಂದ್‌ ಬೆದರಿಕೆ ಹಾಕಿದ್ದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸರ್ಕಾರ ಸಂಧಾನ ಸಭೆಗಳನ್ನು ನಡೆಸಿತ್ತು.

ಮೊದಲ ಹಂತದಲ್ಲಿ ಶೇ. 14ರಷ್ಟು ವೇತನ ಹೆಚ್ಚಿಸಲು ಸರ್ಕಾರ ಒಪ್ಪಿತ್ತು. ಆದರೆ, ಸಾರಿಗೆ ನೌಕರರು ನಾನಾ ಕಾರಣಗಳನ್ನು ನೀಡಿ ಅದನ್ನು ತಿರಸ್ಕರಿಸಿದ್ದರು. ಎರಡನೇ ಹಂತದಲ್ಲಿ ಸರ್ಕಾರಿ ನೌಕರರಿಗೆ ನೀಡಿದ ಶೇ. 17ರಷ್ಟನ್ನು ನೀಡುವುದಾಗಿ ಸರ್ಕಾರ ಹೇಳಿತ್ತಾದರೂ ಅದನ್ನೂ ಸಾರಿಗೆ ನೌಕರರು ಒಪ್ಪಲಿಲ್ಲ. ಕೆಪಿಟಿಸಿಎಲ್‌ ನೌಕರರಿಗೆ 20 ಶೇಕಡಾದಷ್ಟು ವೇತನ ಹೆಚ್ಚಿಸಲಾಗಿದೆ. ನಮಗೆ ಶೇ. 25 ಹೆಚ್ಚಿಸಲೇಬೇಕು ಎಂದು ಪಟ್ಟು ಹಿಡಿಯಲಾಗಿತ್ತು. ಹೀಗಾಗಿ ಸಂಧಾನ ಮುರಿದುಬಿದ್ದಿತ್ತು. ಬಸ್‌ ಬಂದ್‌ ಮುಷ್ಕರವೂ ಮುಂದೂಡಲ್ಪಟ್ಟಿತ್ತು.

ಇದೀಗ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸಂಪುಟ ಸಭೆ ಶೇ. 15ರ ವೇತನ ಹೆಚ್ಚಳವನ್ನು ಅನುಮೋದಿಸಿದೆ. ಇದನ್ನು ನೌಕರರ ಸಂಘ ಒಪ್ಪಿಕೊಳ್ಳುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.

ಈ ನಡುವೆ, ಸರ್ಕಾರ ಸಾರಿಗೆ ನೌಕರರ ವೇತನ ಹೆಚ್ಚಿಸುವ ಜವಾಬ್ದಾರಿಯನ್ನಷ್ಟೇ ಹೊತ್ತುಕೊಂಡಿದೆ. ಆದರೆ, ನೌಕರರಿಗೆ ನೀಡುವ ವೇತನದ ಲೆಕ್ಕಾಚಾರಗಳನ್ನು ನಿಗಮಗಳೇ ನೋಡಿಕೊಳ್ಳಬೇಕು ಎಂದು ಸ್ವಷ್ಟಪಡಿಸಿದೆ. ವೇತನಕ್ಕಾಗಿ ಸರ್ಕಾರದಿಂದ ಯಾವುದೇ ಹೆಚ್ಚುವರಿ ಹಣವನ್ನು ನೀಡಲಾಗದು ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವೆಚ್ಚವನ್ನು ರಾಜ್ಯ ಸರ್ಕಾರವೇ ನಿಗಮಗಳಿಗೆ ಭರಿಸಬೇಕಾಗಿದೆ.

ಇದನ್ನೂ ಓದಿ : ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ

Exit mobile version