Site icon Vistara News

Karnataka Cabinet: ಇಂದು ಬೆಳಗ್ಗೆ 11.45ಕ್ಕೆ ಸಚಿವ ಸಂಪುಟ ವಿಸ್ತರಣೆ, ಸಂಜೆ ಖಾತೆ ಫೈನಲ್, ಯಾರಿಗೆ ಯಾವ ಖಾತೆ?

Siddaramaiah-meeting

ಬೆಂಗಳೂರು: ಇಂದು ಬೆಳಗ್ಗೆ 11.45ರ ಸುಮಾರಿಗೆ ರಾಜಭವನದಲ್ಲಿ ನೂತನ 24 ಸಚಿವರಿಗೆ ಪ್ರಮಾಣ ವಚನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಬೋಧಿಸಲಿದ್ದಾರೆ. ಸಂಜೆ ಸಂಪುಟ ಸಚಿವರಿಗೆ (Karnataka Cabinet) ಖಾತೆಗಳನ್ನು ಸಿಎಂ ಸಿದ್ದರಾಮಯ್ಯ (Siddaramaiah) ಹಂಚಲಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರಿಗೆ ಶಾಸಕರ ಹೆಸರಿನ ಪಟ್ಟಿಯನ್ನು ಸಿದ್ದರಾಮಯ್ಯ ಕಳುಹಿಸಿಕೊಟ್ಟಿದ್ದು, ಪ್ರಮಾಣ ವಚನದ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿರಲಿದ್ದಾರೆ.

ಪರಿಪೂರ್ಣ ಸಂಪುಟವನ್ನು ರಚಿಸುತ್ತಿರುವ ಸಿದ್ದರಾಮಯ್ಯ ಬಹುತೇಕ ಎಲ್ಲ ಸಮುದಾಯಗಳನ್ನು ಸಮಾಧಾನಿಸುವ ಯತ್ನ ಮಾಡಿದ್ದಾರೆ. ಆಕ್ಷೇಪ ಅಸಮಾಧಾನಗಳಿಗಾಗಿ ಒಂದೆರಡು ಸ್ಥಾನ ಉಳಿಸಿಕೊಂಡಿದ್ದಾರೆ.

ಕ್ಯಾಬಿನೆಟ್‌ ಸಭೆಯಲ್ಲಿ ಗ್ಯಾರಂಟಿ ಚರ್ಚೆ

ನೂತನ ಸಚಿವರಿಗೆ ಪ್ರಮಾಣ ವಚನ ಬೆನ್ನಲ್ಲೇ ಇಂದು ಮಧ್ಯಾಹ್ನ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಲ್ಲಿ ಗ್ಯಾರಂಟಿಗಳ ಜಾರಿ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಮೊದಲ ಕ್ಯಾಬಿನೆಟ್‌ನಲ್ಲಿ ತಾತ್ವಿಕ ಒಪ್ಪಿಗೆ ಕೊಡಲಾಗಿತ್ತು. ಮುಂದಿನ ಕ್ಯಾಬಿನೆಟ್‌ನಲ್ಲಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಹೇಳಿದ್ದರು. ಶೀಘ್ರವೇ ಕೆಲವನ್ನಾದರೂ ಈಡೇರಿಸದಿದ್ದರೆ ಜನಾಕ್ರೋಶಕ್ಕೆ ಒಳಾಗುತ್ತೇವೆಂದು ಕೆಲ ಹಿರಿಯರು ಸಲಹೆ ನೀಡಿದ್ದರಿಂದ, ಅವುಗಳ ಅಧಿಕೃತ ಘೋಷಣೆಯ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಪಕ್ಕಾ

ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಬೋಸರಾಜುಗೆ ಸ್ಥಾನ ಕೊಟ್ಟಿದ್ದರಿಂದ ರಾಜೀನಾಮೆ ಬಗ್ಗೆ ಬಿ.ಕೆ ಹರಿಪ್ರಸಾದ್ ಮಾತನಾಡಿದ್ದಾರೆ. ಹಿರಿಯರಾದ ದೇಶಪಾಂಡೆಯವರಿಂದಲೂ ಅಸಮಾಧಾನ ವ್ಯಕ್ತವಾಗಿದೆ. ರಾಯರೆಡ್ಡಿ, ಅಜೇಯ್ ಸಿಂಗ್, ಎಂ. ಕೃಷ್ಣಪ್ಪ, ಜಯಚಂದ್ರ, ನರೇಂದ್ರ ಸ್ವಾಮಿ ಅವರೂ ಸಚಿವ ಸ್ಥಾನ ನಿರೀಕ್ಷಿಸಿ ಸಿಗದೆ ಹೋದುದರಿಂದ ಅಸಮಾಧಾನಪಟ್ಟಿದ್ದಾರೆ.

ಕೆಲವು ವಲಸಿಗರು ಗೆದ್ದು ಬಂದರೂ ಅವರಿಗೆ ಸ್ಥಾನ ಸಿಕ್ಕಿಲ್ಲ. ಗುಬ್ಬಿ ಶ್ರೀನಿವಾಸ, ಲಕ್ಷ್ಮಣ ಸವದಿ, ಶಿವಲಿಂಗೇಗೌಡರಿಗೆ ಸಂಪುಟ ಸ್ಥಾನ ಪಡೆದಿಲ್ಲ. ಕೆಲವು ಸಮುದಾಯಗಳು ಅವಕಾಶ ಪಡೆದಿಲ್ಲ. ಉದಾಹರಣೆಗೆ ಬಂಜಾರ, ಬಂಟ, ನೇಕಾರ, ಭಜಂತ್ರಿ, ಕೊಡವ ಸಂಪುಟದಲ್ಲಿ ಅವಕಾಶ ಸಿಗದ ಸಮುದಾಯಗಳು.

ಇಂದು ಸಂಜೆ ಖಾತೆ ಫೈನಲ್, ಯಾರಿಗೆ ಯಾವುದು?

ಖಾತೆಗಳ ಹಂಚಿಕೆ ಬಗ್ಗೆ ಈಗಾಗಲೇ ಹೈಕಮಾಂಡ್ ಜತೆ ಸಿಎಂ ಚರ್ಚೆ ಮಾಡಿದ್ದಾರೆ. ರಾತ್ರಿ ರಣದೀಪ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿಯವರನ್ನು ಕೂರಿಸಿಕೊಂಡು ಹೈಕಮಾಂಡ್‌ ಅಂತಿಮ ಮಾಡಿದೆ.

ಸಂಭಾವ್ಯ ಸಚಿವ ಸ್ಥಾನಗಳು ಹೀಗಿವೆ:

ಸಿದ್ದರಾಮಯ್ಯ – ಹಣಕಾಸು, ಆಡಳಿತ ಸಿಬ್ಬಂದಿ, ಗುಪ್ತಚರ
ಡಿಕೆಶಿ – ಜಲಸಂಪನ್ಮೂಲ, ಇಂಧನ
ಎಂಬಿ ಪಾಟೀಲ್ – ಗೃಹ
ಎಚ್.ಕೆ ಪಾಟೀಲ್ – ಗ್ರಾಮೀಣ ಅಭಿವೃದ್ಧಿ
ಮುನಿಯಪ್ಪ – ಕಂದಾಯ
ಪ್ರಿಯಾಂಕಾ ಖರ್ಗೆ – ಸಮಾಜ ಕಲ್ಯಾಣ
ಮಹಾದೇವಪ್ಪ – ಲೋಕೋಪಯೋಗಿ
ಜಾರ್ಜ್ – ಬೆಂಗಳೂರು ಅಭಿವೃದ್ಧಿ
ರಾಮಲಿಂಗರೆಡ್ಡಿ – ನಗರಾಭಿವೃದ್ಧಿ
ಜಮೀರ್ – ವಾಕ್ಫ್ – ವಸತಿ
ಪರಮೇಶ್ವರ್ – ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
ಸಂತೋಷ್ ಲಾಡ್ – ಕಾರ್ಮಿಕ
ಬೈರತಿ ಸುರೇಶ್ – ಹಿಂದುಳಿದ ವರ್ಗ
ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಈಶ್ವರ್ ಖಂಡ್ರೆ – ಪೌರಾಡಳಿತ
ಮಾಂಕಳ ವೈದ್ಯ – ಮೀನುಗಾರಿಕೆ ಬಂದರು
ಕೃಷ್ಣಬೈರೇಗೌಡ – ಕಾನೂನು ಮತ್ತು ಸಂಸದೀಯ, ಕೃಷಿ
ಚಲುವರಾಯಸ್ವಾಮಿ – ಸಾರಿಗೆ
ಎಂ.ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
ಮಲ್ಲಿಕಾರ್ಜುನ – ತೋಟಗಾರಿಕೆ

ಇದನ್ನೂ ಓದಿ: ವಿಸ್ತಾರ TOP 10 NEWS: ಗ್ಯಾರಂಟಿಗೆ ಮುಗಿಬಿದ್ದ ಸಾರ್ವಜನಿಕರಿಂದ, ಸಂಪುಟ ವಿಸ್ತರಣೆ ಅಸಮಾಧಾನದವರೆಗಿನ ಪ್ರಮುಖ ಸುದ್ದಿಗಳಿವು

Exit mobile version