Site icon Vistara News

Karnataka Cabinet: ಬಸ್‌ ಓಡಿಸೋದಿಲ್ಲ ಎಂದಿದ್ದ ರಾಮಲಿಂಗಾರೆಡ್ಡಿ: ಡಿ.ಕೆ. ಬ್ರದರ್ಸ್‌ ʼಗ್ಯಾರಂಟಿಗೆʼ ಸಮ್ಮತಿ

Ramalingareddy and DK Shivakumar

#image_title

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಂತರದಲ್ಲಿ ಎದ್ದಿರುವ ಅಸಮಾಧಾನವನ್ನು ಒಂದೊಂದಾಗಿ ನಿವಾರಣೆ ಮಾಡಿಕೊಂಡು ಬರಲು ಮುಂದಾಗಿರುವ ಕಾಂಗ್ರೆಸ್‌, ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಯಶಸ್ವಿಯಾಗಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಇಲಾಖೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದರು. ಕರ್ನಾಟಕ ಸರ್ಕಾರದ ಪ್ರಮುಖ ಬಸ್‌ ಸೇವೆ ಕೆಎಸ್‌ಆರ್‌ಟಿಸಿ ಸೇರಿ ಒಟ್ಟಾರೆ ಸಾರಿಗೆ ಕ್ಷೇತ್ರವನ್ನು ನಿಭಾಯಿಸುವ ಖಾತೆ ಇದು ಎಂದು ಅನೇಕರು ಮನವೊಲಿಸಿದರೂ, ತಮಗಿಂತ ಸಾಕಷ್ಟು ಕಿರಿಯ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌ ಅಂಥವರಿಗೆಲ್ಲ ಕಂದಾಯ, ಆರೋಗ್ಯದಂತಹ ದೊಡ್ಡ ಇಲಾಖೆಗಳನ್ನು ನೀಡಲಾಗುತ್ತಿದೆ. ತಮಗೆ ಮಾತ್ರ ಸಾರಿಗೆ ನೀಡುತ್ತಿರುವುದು ಅವಮಾನ ಎಂದು ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದರು.

ಈ ಕುರಿತು ಮಾತುಕತೆ ನಡೆಸಲು ಸಂಸದ ಡಿ.ಕೆ. ಸುರೇಶ್‌ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿದರು. ಈ ವೇಳೆಯೂ ಆಸಮಾಧಾನ ಹೊರಹಾಕಿದ ರಾಮಲಿಂಗಾರೆಡ್ಡಿ, ಈ ರೀತಿ ಅವಮಾನ ಆಗುವುದಕ್ಕಿಂತಲೂ ಸಚಿವ ಸ್ಥಾನ ತೆಗೆದುಕೊಳ್ಳದೇ ಇರುವುದೇ ಒಳ್ಳೆಯದು ಎಂದಿದ್ದಾರೆ.

ಕೊನೆಗೂ ಸಾಕಷ್ಟು ಹೊತ್ತು ಮಾತುಕತೆ ನಡೆಸಿದ ಸಹೋದರರು, ಸಾರಿಗೆ ಇಲಾಖೆ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು ಖಾತೆ ನೀಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇದರ ನಂತ ನಗುಮುಖದಿಂದ ರಾಮಲಿಂಗಾರೆಡ್ಡಿ ಅವರ ಜತೆಗೆ ಡಿ.ಕೆ. ಶಿವಕುಮಾರ್‌ ಹೊರಬಂದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಆ ರೀತಿ ಮಾತುಕತೆಯೇ ನಡೆದಿಲ್ಲ ಎಂದು ತಿಳಿಸಿದರು. ಯಾವ ಮಾತುಕತೆಯೂ ನಡೆದಿಲ್ಲ. ನಾನು ಪಕ್ಷದ ಅಧ್ಯಕ್ಷ ಅವರು ಕಾರ್ಯಾಧ್ಯಕ್ಷರು. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲ ಮಾತುಕತೆ ಮಾಡಿದ್ದೇವೆ. ಊಹಪೋಹಗಳು ಬಂದಿವೆ.

ರಾಮಲಿಂಗಾರೆಡ್ಡಿ ಅವರು ಎಂಟು ಬಾರಿ ಶಾಸಕರು ಆಗಿರುವವರು. ಕಳೆದ ಬಾರಿ ನಮಗೂ ಇರಲಿಲ್ಲ.. ಅವರಿಗೂ ಇರಲಿಲ್ಲ. ರಾಮಲಿಂಗಾರೆಡ್ಡಿ ಅವರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಪಕ್ಷ ಕಟ್ಟಿದ್ದೇವೆ, ಬೆಳೆಸಿದ್ದೇವೆ ನೋವು ತಿಂದಿದ್ದೇವೆ. ಬೇರೆ ಕಡೆ ಹೋಗಿದ್ದರೆ ಏನೆನೋ ಆಗುತ್ತಿದ್ದೆವು. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು ಎಂದರು.

ಗ್ಯಾರಂಟಿ ಬಗ್ಗೆ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಟೀಕೆ ಮಾಡಿದ್ದಾರೆ ತಾನೇ.. ಮಾಡಲಿ. 15 ಲಕ್ಷ ರೂ. ಅಕೌಂಟ್‌ಗೆ ಎಂದು ಹೇಳಿದ್ದರಲ್ಲ? ಏನಾಯ್ತು? ಒಂದು ಲಕ್ಷ ರೂ. ಸಾಲಮನ್ನಾ ಮಾಡ್ತೇವೆ ಅಂದ್ರು..‌ಏನಾಯಿತು? ಎಂದು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ: congress guarantee: ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದಂತೆ ಗ್ಯಾರಂಟಿ ಜಾರಿ ಅಸಾಧ್ಯ: ಸತೀಶ್‌ ಜಾರಕಿಹೊಳಿ

Exit mobile version