Site icon Vistara News

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

cauvery dispute

Karnataka Cannot Release Cauvery Water To Tamil Nadu; CWRC Slams

ನವದೆಹಲಿ: ಕರ್ನಾಟಕದಲ್ಲಿ ಬರಗಾಲವಿದ್ದರೂ ಕಾವೇರಿ ನದಿ ನೀರು (Cauvery Dispute) ವಿಚಾರದಲ್ಲಿ ಮೊಂಡಾಟ ಪ್ರದರ್ಶಿಸುತ್ತಿದ್ದ ತಮಿಳುನಾಡಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಸಮಿತಿ ಸಭೆಯಲ್ಲಿ ಭಾರಿ ಮುಖಭಂಗವಾಗಿದೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ವಾದವನ್ನು ಒಪ್ಪದ ಸಿಡಬ್ಲ್ಯೂಆರ್‌ಸಿಯು ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ, ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ಭಾರಿ ಮುಖಭಂಗವಾಗಿದೆ.

ತಮಿಳುನಾಡಿಗೆ ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು 2023-24ನೇ ಜಲವರ್ಷದ ಅಂತಿಮ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಖಡಕ್‌ ಆದೇಶ ನೀಡಿದೆ. “ಕರ್ನಾಟಕದಲ್ಲಿ ತೀವ್ರ ಬರಗಾಲ ಇರುವುದರಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಿಂದ ನೈಸರ್ಗಿಕವಾಗಿ ನದಿ ಸೇರುವ ನೀರನ್ನು ಬಳಸಿಕೊಳ್ಳಿ” ಎಂಬುದಾಗಿ ತಮಿಳುನಾಡಿಗೆ ಸೂಚನೆ ನೀಡಿದೆ. ಮೇ 21ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಲಿದ್ದು, ಅಲ್ಲೂ ತಮಿಳುನಾಡು ತನ್ನ ಮೊಂಡುವಾದ ಮುಂದಿಡಲಿದೆ ಎಂದು ಹೇಳಲಾಗುತ್ತಿದೆ.

Cauvery water CWRC order

ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು. ಆದರೆ, ಮೇ ಅಂತ್ಯದವರೆಗೂ ನೀರು ಬಿಡಬೇಕು ಎಂಬುದು ತಮಿಳುನಾಡಿನ ವಾದವಾಗಿತ್ತು. ಇದನ್ನು ಸಿಡಬ್ಲ್ಯೂಆರ್‌ಸಿ ನಿರಾಕರಿಸಿದೆ.

ಕರ್ನಾಟಕದಲ್ಲಿ ಕೆಲ ದಿನಗಳಿಂದ ಮಳೆ ಬರುತ್ತಿದೆ. ಇಷ್ಟಾದರೂ ಅಣೆಕಟ್ಟುಗಳು ತುಂಬಿಲ್ಲ. ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೇ 31 ದೇಶವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದು ರೈತರ ಪಾಲಿಗೆ ಸಿಹಿ ಸುದ್ದಿಯೇ ಆಗಿದೆ. ಮೇ 27ರಿಂದ ಜೂನ್‌ 4ರ ಅವಧಿಯಲ್ಲಿ ಯಾವಾಗ ಬೇಕಾದರೂ ನೈಋತ್ಯ ಮುಂಗಾರು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರತಿ ವರ್ಷ ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ದೇಶಾದ್ಯಂತ ವ್ಯಾಪಿಸುವುದು ವಾಡಿಕೆಯಾಗಿದೆ. ಆದರೆ, ಹವಾಮಾನ ಇಲಾಖೆಯು ಈ ಬಾರಿ ಒಂದು ದಿನ ಮೊದಲೇ ಪ್ರವೇಶಿಸಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಮಳೆ ಅಂತ್ಯವಾಗಲಿದೆ.

ಇದನ್ನೂ ಓದಿ: HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

Exit mobile version