Site icon Vistara News

Karnataka CM: ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಒಂದಾಗಿರಲಿವೆ ಎಂದ ಸಿದ್ದರಾಮಯ್ಯ

Congress describes as winning team

Congress describes as winning team

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 135 ಸ್ಥಾನಗಳ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್‌ ಕೊನೆಗೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು (Karnataka CM) ಅಂತಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ನಡುವೆ ಜೀಕಾಡಿದ ಮುಖ್ಯಮಂತ್ರಿ ಪಟ್ಟ ಕೊನೆಗೂ ಸಿದ್ದರಾಮಯ್ಯ ಅವರಿಗೆ ಒಲಿದಿದೆ. ಈ ಪಟ್ಟಕ್ಕಾಗಿ ಭಾರಿ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್‌ ಅವರನ್ನು ಸಮಾಧಾನಪಡಿಸಿ ಡಿಸಿಎಂ ಹುದ್ದೆಗೆ ಫಿಕ್ಸ್‌ ಮಾಡಲಾಗಿದೆ.

ಬುಧವಾರ ಮಧ್ಯರಾತ್ರಿಯವರೆಗೂ ನಡೆದ ಸಂಧಾನ ಮಾತುಕತೆಯಲ್ಲಿ ಅಂತಿಮವಾಗಿ ಡಿಕೆ ಶಿವಕುಮಾರ್‌ ಅವರು ತಮ್ಮ ಪಟ್ಟು ಬದಲಿಸಿ ಡಿಸಿಎಂ ಆಗಲು ಒಪ್ಪಿದ್ದರಿಂದ ಸಮಸ್ಯೆ ಪರಿಹಾರವಾಯಿತು. ಇದರಿಂದಾಗಿ ನಾಲ್ಕು ದಿನಗಳ ಕಾಲ ಇದ್ದ ಭಾರಿ ಗೊಂದಲ, ಆತಂಕದ ವಾತಾವರಣ ತಿಳಿಯಾಯಿತು.

ಗುರುವಾರ ಮುಂಜಾನೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರಿಬ್ಬರೂ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರ ಮನೆಯಲ್ಲಿ ಉಪಾಹಾರ ಸೇವಿಸಿ ಬಳಿಕ ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದರು. ಅಲ್ಲಿ ಪರಸ್ಪರ ಮಾತುಕತೆ ನಡೆಸುವ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ತೆಗೆಸಿದ ಒಂದು ಭಾವಚಿತ್ರ ಸಖತ್‌ ಸುದ್ದಿ ಮಾಡುತ್ತಿದೆ.

ನಾಲ್ಕು ದಿನ ಮುಖಾಮುಖಿಯಾಗದ, ಮುಖ ನೋಡದ ಇಬ್ಬರು ನಾಯಕರು ಖರ್ಗೆಯವರ ಅಕ್ಕಪಕ್ಕದಲ್ಲಿ ನಿಂತಿದ್ದರು. ಖರ್ಗೆ ಅವರು ಅವರಿಬ್ಬರ ಕೈಗಳನ್ನೂ ಮೇಲೆತ್ತಿ ತಮ್ಮೊಳಗೆ ಯಾವುದೆ ಗೊಂದಲವಿಲ್ಲ, ಬೇಸರವಿಲ್ಲ ಎಂಬ ಸಂದೇಶ ಸಾರಿದರು. ನಾಲ್ಕು ದಿನಗಳ ಕಾಲ ಏನೂ ನಡೆದೇ ಇಲ್ಲ ಎಂಬಂತೆ ಪೋಸು ನೀಡಿದ ನಾಯಕರು ಕನ್ನಡಿಗರ ಮುಂದೆ ತಾವಿಬ್ಬರೂ ಒಂದೇ ಎಂಬಂತೆ ಪರೋಕ್ಷವಾಗಿ ಘೋಷಣೆ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಣದೀಪ್‌ ಸುರ್ಜೇವಾಲ, ಡಿ.ಕೆ. ಶಿವಕುಮಾರ್‌ ಅವರೆಲ್ಲರೂ ಈ ಭಾವಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡರು.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ರಾಜ್ಯ ಬಿಜೆಪಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ʻಇದು ವಿನ್ನಿಂಗ್‌ ಟೀಮ್‌ʼ ಎಂದು ಘೋಷಿಸಿದರು.

ಮುಖ್ಯಮಂತ್ರಿಯಾಗಿ ನಿಯೋಜಿತರಾದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ʻಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆʼ ಎಂದು ಘೋಷಿಸಿದರು.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತೂ ತುಂಬ ಖುಷಿಯಿಂದ ಪ್ರತಿಕ್ರಿಯಿಸಿ, ʻʻಕಾಂಗ್ರೆಸ್‌ ಟೀಮ್‌ ಕರ್ನಾಟಕದ ಜನತೆಯ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆʼ ಎಂದು ಹೇಳಿದರು. 6.5 ಕೋಟಿ ಜನರಿಗೆ ಕಾಂಗ್ರೆಸ್‌ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಡಿಸಿಎಂ ಆಗಿ ನಿಯೋಜಿತರಾದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಕೂಡಾ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.

ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈ ಫೋಟೊವನ್ನು ಪೋಸ್ಟ್‌ ಮಾಡಿ ವಿನ್ನಿಂಗ್‌ ಟೀಮ್‌ ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: Karnataka CM: ಸಿದ್ದು, ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ 1 ಲಕ್ಷ ಜನ ನಿರೀಕ್ಷೆ; ಕಂಠೀರವದಲ್ಲಿ ಸಿದ್ಧತೆ

Exit mobile version