ಬೆಂಗಳೂರು/ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka CM) ಫಲಿತಾಂಶಕ್ಕಿಂತ ರಾಜ್ಯದ ಜನರಿಗೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲವೇ ಜಾಸ್ತಿಯಾಗಿದೆ. ಮುಖ್ಯಮಂತ್ರಿ ಆಯ್ಕೆಗಾಗಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಯು ರದ್ದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದಿಢೀರನೆ ಹೊಟ್ಟೆ ಉರಿ ಕಾಣಿಸಿಕೊಂಡ ಕಾರಣ ಅವರು ದೆಹಲಿಗೆ ತೆರಳಲು ಆಗಿಲ್ಲ. ಹಾಗಾಗಿ, ಸಭೆ ರದ್ದಾಗಿದ್ದು, ಮಂಗಳವಾರ ಡಿಕೆಶಿ ಅವರು ದೆಹಲಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಹಾಗೂ ಕುತೂಹಲ ಒಟ್ಟಿಗೆ ಮೂಡಿವೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕೊನೆಯ ಕ್ಷಣದಲ್ಲಿ ದೆಹಲಿಗೆ ತೆರಳಲಿಲ್ಲ. ಹಾಗಾಗಿ, ಹೈಕಮಾಂಡ್ ನಾಯಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಸಭೆ ರದ್ದುಗೊಳಿಸಿದ ಕುರಿತು ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ. ಇನ್ನು, ಡಿಕೆಶಿ ಅವರು ಮಂಗಳವಾರ ದೆಹಲಿಗೆ ತೆರಳುವ ಸಾಧ್ಯತೆ ಇರುವ ಕಾರಣ, ಮಂಗಳವಾರ ಯಾರು ಸಿಎಂ ಆಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ ಎನ್ನಲಾಗಿದೆ.
ಮಂಗಳವಾರವೂ ಡಿಕೆಶಿ ಆರೋಗ್ಯ ತಪಾಸಣೆ
ಡಾ.ಶಂಕರ್ ಗುಹಾ ಅವರು ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ತಪಾಸಣೆ ಮಾಡಿದ್ದು, ಸೋಮವಾರ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ತಪಾಸಣೆ ಬಳಿಕ ಮಾತನಾಡಿದ ಅವರು, “ಡಿಕೆಶಿ ಅವರ ಬಿಪಿ ಚೆಕ್ ಮಾಡಲಾಗಿದೆ. ಮೂರು ಗಂಟೆ ರೆಸ್ಟ್ ಮಾಡಿ ಎಂಬುದಾಗಿ ಸೂಚಿಸಿದ್ದೇನೆ. ಸತತವಾಗಿ ಓಡಾಟ ಮಾಡಿದ್ದರಿಂದ ಏರುಪೇರಾಗಿದೆ. ಸದ್ಯಕ್ಕೆ ಟ್ರಾವೆಲ್ ಬೇಡ ಎಂಬುದಾಗಿ ಹೇಳಿದ್ದೇನೆ. ಮಂಗಳವಾರ ಬೆಳಗ್ಗೆಯೂ ಆರೋಗ್ಯ ತಪಾಸಣೆ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Karnataka CM: ದಿಢೀರನೆ ಕಾಣಿಸಿಕೊಂಡ ಹೊಟ್ಟೆ ಉರಿ, ದೆಹಲಿಗೆ ತೆರಳದ ಡಿಕೆಶಿ; ಸಿಎಂ ಘೋಷಣೆ ಮತ್ತೆ ವಿಳಂಬ?
ದೆಹಲಿ ತಲುಪಿದ ಡಿ.ಕೆ.ಸುರೇಶ್
ಡಿ.ಕೆ.ಶಿವಕುಮಾರ್ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸುರೇಶ್ ತೆರಳಿದ್ದು, ಹಲವು ಮುಖಂಡರನ್ನು ಭೇಟಿಯಾಗಿ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದ್ದಾರೆ. ಮುಖ್ಯಮಂತ್ರಿ ಘೋಷಣೆಯಾಗುವವರೆಗೂ ಸುರೇಶ್ ದೆಹಲಿಯಲ್ಲೇ ಇರಲಿದ್ದಾರೆ ಎಂದು ತಿಳಿದುಬಂದಿದೆ.