Site icon Vistara News

Karnataka CM: ರಾಹುಲ್‌, ಖರ್ಗೆ ಜತೆ 4 ಗಂಟೆ ಮಾತುಕತೆ; ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್‌

karnataka-cm: DK Shivakumar not ready accept siddaramaiah as CM

karnataka-cm: DK Shivakumar not ready accept siddaramaiah as CM

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ (Karnataka CM) ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ನಡೆಸಿದ ಒಟ್ಟು ನಾಲ್ಕು ಗಂಟೆಗಳ ಮಾತುಕತೆ ಯಾವ ಫಲವನ್ನೂ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೊಡುವುದಿದ್ದರೆ ಮುಖ್ಯಮಂತ್ರಿ ಸ್ಥಾನ ಕೊಡಿ, ಇಲ್ಲದಿದ್ದರೆ ಏನೂ ಬೇಡ ಎಂಬ ತಮ್ಮ ಹಠದಿಂದ ಒಂದಿಂಚೂ ಹಿಂದೆ ಸರಿದಿಲ್ಲ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನಲ್ಲಿ ಈಗ ಸಿಎಂ ಆಯ್ಕೆಯೇ ಕಗ್ಗಂಟಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಬುಧವಾರಕ್ಕೆ ನಾಲ್ಕನೇ ದಿನ. ಮಂಗಳವಾರದಿಂದ ಹೈಕಮಾಂಡ್‌ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಯಾವುದೇ ಫಲ ನೀಡಿಲ್ಲ. ನನಗೆ ಸಿಎಂ ಸ್ಥಾನವೇ ಬೇಕು, ಅದನ್ನು ಕೊಡುವುದು ಸಾಧ್ಯವಿಲ್ಲ ಎಂದರೆ ಬೇರೆ ಯಾವ ಹುದ್ದೆಯೂ ಬೇಡ ಎಂದು ಹಠ ಹಿಡಿದಿರುವ ಡಿ.ಕೆ. ಶಿವಕುಮಾರ್‌ ಅವರು, ಸಿಎಂ ಹುದ್ದೆಯನ್ನು ನನಗೆ ಕೊಡುವುದಿಲ್ಲ ಎಂದರೆ ಸಿದ್ದರಾಮಯ್ಯ ಅವರಿಗೂ ಬೇಡ, ಬೇರೆ ಯಾರಿಗಾದರೂ ಕೊಡಿ ಎಂಬ ದಾಳ ಉರುಳಿಸಿದ್ದಾರೆ.

ನಾಲ್ಕು ಗಂಟೆ ಮಾತುಕತೆಗೂ ಜಗ್ಗದ ಡಿಕೆ ಶಿವಕುಮಾರ್‌

ಬುಧವಾರ ಮುಂಜಾನೆ 11.೦೦ ಗಂಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅವರಿಬ್ಬರ ಭೇಟಿ ಕೇವಲ ಅರ್ಧ ಗಂಟೆಯಲ್ಲಿ ಮುಕ್ತಾಯವಾಗಿದೆ. ಬಳಿಕ 11.30ಕ್ಕೆ ರಾಹುಲ್‌ ಗಾಂಧಿ ಅವರ ಭೇಟಿಗೆ ತೆರಳಿದ ಡಿ.ಕೆ. ಶಿವಕುಮಾರ್‌ ಸುಮಾರು ಎರಡು ಗಂಟೆಗಳಷ್ಟು ಕಾಲ ಮಾತುಕತೆ ನಡೆಸಿದರು. ಎರಡು ಗಂಟೆ ಕಾಲ ಮಾತುಕತೆ ನಡೆಸಿದರೂ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪಟ್ಟು ಸಡಿಲಿಸಿಲ್ಲ ಎನ್ನಲಾಗಿದೆ.

ಸಿಎಂ ಬೇಕು, 50:50 ಬೇಡವೇ ಬೇಡ

ರಾಹುಲ್‌ ಗಾಂಧಿ ಅವರ ಜತೆಗಿನ ಮಾತುಕತೆ ವೇಳೆ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಸ್ಥಾನಕ್ಕಾಗಿ ಪಟ್ಟುಹಿಡಿದಿದ್ದರು ಎನ್ನಲಾಗಿದೆ. ಇಬ್ಬರಿಗೂ ಅರ್ಧಾವಧಿ ಅಧಿಕಾರ ನೀಡೋಣ, ಇಬ್ಬರಿಗೂ ಸಿಎಂ ಸ್ಥಾನ ಸಿಗುತ್ತದೆ ಎಂಬ ರಾಹುಲ್‌ ಗಾಂಧಿ ಅವರ ಸೂತ್ರವನ್ನು ಡಿ.ಕೆ.ಶಿ ಒಪ್ಪಿಲ್ಲ. ಡಿಸಿಎಂ ಆಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ʻʻನಾನು ಪಕ್ಷಕ್ಕೆ ಬದ್ಧನಾಗಿರುವ ಸೈನಿಕ. ಕೊಟ್ಟರೆ ಸಿಎಂ ಸ್ಥಾನ ಕೊಡಿ, ಇಲ್ಲವಾದರೆ ಬೇರೆ ಯಾವುದೂ ಬೇಡ. ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಬೇಡʼʼ ಎಂದು ರಾಹುಲ್ ಗಾಂಧಿ ಎದುರು ಡಿ.ಕೆ.ಶಿವಕುಮಾರ್ ಪಟ್ಟುಹಿಡಿದಿದ್ದಾರೆ.

ʻʻನನಗೆ ಪೂರ್ಣಾವಧಿಗೆ ಸಿಎಂ ಸ್ಥಾನ ನೀಡಬೇಕು. 50:50 ಹಂಚಿಕೆ ಬೇಕಾಗಿಲ್ಲ. ನಾನು ಪಕ್ಷವನ್ನು ಅತ್ಯಂತ ಸಂಕಷ್ಟ ಕಾಲದಲ್ಲಿ ಗಟ್ಟಿಗೊಳಿಸಿದ್ದೇನೆ. ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ನನಗೆ ಆಮೇಲೆ ಅವಕಾಶ ಸಿಗಲ್ಲʼʼ ಎಂದಿರುವ ಡಿ.ಕೆ. ಶಿವಕುಮಾರ್‌, ನನಗೆ ಸಿಎಂ ಸ್ಥಾನವೇ ಬೇಕು, ಉಳಿದಂತೆ ನೀವೇ ನಿರ್ಧಾರ ತೆಗೆದುಕೊಳ್ಳಿʼʼ ಎಂದು ಡಿ.ಕೆ. ಶಿವಕುಮಾರ್‌ ಒತ್ತಾಯ ಮಾಡಿದ್ದಾರೆ.

ಈ ನಡುವೆ, 2019ರಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಕೂಡಾ ಸಿದ್ದರಾಮಯ್ಯ ಅವರೇ ಕಾರಣ. ತಮ್ಮದೇ ಆತ್ಮೀಯ ಶಾಸಕರನ್ನು ಬಿಜೆಪಿಗೆ ಕಳುಹಿಸಿ ಸರ್ಕಾರ ಪತನವಾಗಲು ಕಾರಣವಾಗಿದ್ದಾರೆ ಎಂಬ ಆಪಾದನೆಯನ್ನೂ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೂ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು. ಅಲ್ಲಿ ಕೂಡಾ ರಾಹುಲ್‌ ಗಾಂಧಿ ಜತೆಗಿನ ಮಾತುಕತೆಯ ಪಟ್ಟನ್ನೇ ಡಿಕೆಶಿ ಮುಂದುವರಿಸಿದ್ದಾರೆ. ಒಂದು ಹಂತದಲ್ಲಿ ನನಗೆ ಕೊಡುವುದಿಲ್ಲ ಎಂದಾದರೆ ನೀವೇ ಸಿಎಂ ಆಗಿ ಎಂಬ ಆಫರನ್ನು ಡಿ.ಕೆ.ಶಿವಕುಮಾರ್‌ ಖರ್ಗೆ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಇಬ್ಬರೂ ನಾಯಕರ ಜತೆ ಮಾತನಾಡಿದ ಬಳಿಕ ಮಾಧ್ಯಮದ ಮುಂದೆ ಕಾಣಿಸಿಕೊಂಡ ಡಿ.ಕೆ. ಶಿವಕುಮಾರ್‌ ಅವರು, ಮಾಧ್ಯಮಗಳಲ್ಲಿ ತೋರಿಸುತ್ತಿವುದೆಲ್ಲವೂ ಕಪೋಲಕಲ್ಪಿತ ಎಂದರು.

ಈ ನಡುವೆ, ಡಿ.ಕೆ.ಶಿವಕುಮಾರ್‌ ಅವರು ತಮ್ಮ ಆಪ್ತರ ಜತೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: DK Shivakumar: ಮತ್ತೆ ಬೆನ್ನುಹತ್ತಿದ ಸಿಬಿಐ; ಡಿ.ಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌

Exit mobile version