ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Election 2023) 135 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದ ಕಾಂಗ್ರೆಸ್ ಕೊನೆಗೂ ಮುಖ್ಯಮಂತ್ರಿ (Karnataka CM) ಯಾರೆಂಬುದನ್ನು ಅಂತಿಮಗೊಳಿಸುವಲ್ಲಿ ಸಫಲವಾಗಿದೆ. ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಜಟಾಪಟಿಯಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಹುದ್ದೆ ನೀಡಿ, ಡಿ.ಕೆ ಶಿವಕುಮಾರ್ ಅವರನ್ನು ಡಿಸಿಎಂ ಹುದ್ದೆಗೆ ಮನವೊಲಿಸುವಲ್ಲಿ ಸಫಲವಾಗಿದೆ. ಆದರೆ, ಇದರ ನಡುವೆಯೇ ಈಗ ಉಪಮುಖ್ಯಮಂತ್ರಿ ಹುದ್ದೆಯ (Deputy Chief minister post) ಇಕ್ಕಟ್ಟು ಎದುರಾಗುವ ಸಾಧ್ಯತೆ ಕಂಡುಬಂದಿದೆ.
ರಾಜ್ಯದಲ್ಲಿ ಈಗ ಡಿ.ಕೆ. ಶಿವಕುಮಾರ್ ಅವರನ್ನು ಡಿಸಿಎಂ ಎಂದು ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿ ತಾನೊಬ್ಬನೇ ಇರಬೇಕು, ಒಂದಕ್ಕಿಂತ ಹೆಚ್ಚು ಡಿಸಿಎಂಗಳು ಬೇಡ ಎನ್ನುವ ಷರತ್ತನ್ನು ಡಿಕೆ ಶಿವಕುಮಾರ್ ಮಂಡಿಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಹೈಕಮಾಂಡ್ ಕೂಡಾ ಒಪ್ಪಿದೆ ಎನ್ನಲಾಗಿದೆ. ನಾಲ್ಕಾರು ಡಿಸಿಎಂಗಳ ಪೈಕಿ ತಾನೊಬ್ಬ ಎನ್ನುವಂತಾಗಬಾರದು ಎನ್ನುವುದು ಡಿಕೆಶಿಯ ವಾದ ಎನ್ನಲಾಗಿದೆ. ಹಾಗೋ ಹೀಗೋ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಡಿಸಿಎಂ ಹುದ್ದೆಗೆ ಒಪ್ಪಿಸಿದ ಹೈಕಮಾಂಡ್ ಅವರ ಈ ಬೇಡಿಕೆಗೆ ಅಸ್ತು ಎಂದಿದೆ.
ಆದರೆ, ಇತ್ತ ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಸಮುದಾಯಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಕನಿಷ್ಠ ನಾಲ್ಕು ಸಿಎಂಗಳನ್ನಾದರೂ ನೇಮಕ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಹೀಗಾಗಿ ಒಂದು ಸಮಸ್ಯೆಯಿಂದ ಪಾರಾದ ಹೈಕಮಾಂಡ್‌ಗೆ ಇನ್ನೊಂದು ಸಮಸ್ಯೆ ಎದುರಾಗಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಡಿಸಿಎಂ ಆಗಿ ನೇಮಿಸುವ ಜತೆಗೆ ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯಗಳಿಗೂ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಈ ವಿಚಾರದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಮುದಾಯದ ನಾಯಕರಾದ ಎಂ.ಬಿ. ಪಾಟೀಲ್, ಜಿ. ಪರಮೇಶ್ವರ್ ಮತ್ತು ಜಮೀರ್ ಅಹಮದ್ ಖಾನ್ ಮುಂದಾಗಿದ್ದಾರೆ.
ತಮ್ಮ ಸಮುದಾಯದವರು ಕಾಂಗ್ರೆಸ್ ಪರವಾಗಿ ಬಲವಾಗಿ ನಿಂತಿದ್ದಾರೆ. ಇದರಿಂದಾಗಿಯೇ ಕಾಂಗ್ರೆಸ್ ಈ ಮಟ್ಟದ ಗೆಲುವು ಸಾಧಿಸಲು ಕಾರಣವಾಗಿದೆ ಎಂದು ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.
ಲಿಂಗಾಯತ ಮುಖಂಡ ಎಂ.ಬಿ. ಪಾಟೀಲ್ ಅವರಂತೂ ದೆಹಲಿಗೇ ಹೋಗಿ ಲಾಬಿ ಮಾಡಿದ್ದಾರೆ. ಇತ್ತ ಡಾ. ಜಿ. ಪರಮೇಶ್ವರ್ ಅವರು ನೇರವಾಗಿ ತಾನೇ ಡಿಸಿಎಂ ಹುದ್ದೆಯ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಮತ್ತು ಬೆಂಗಳೂರಿನಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಮಾತುಕತೆ ನಡೆಸಿದರು.
ಈ ನಡುವೆ ನಮ್ಮ ಸಮಾಜದ ಹಲವಾರು ಹಿರಿಯ ಮುಖಂಡರು ಡಿಸಿಎಂ ರೇಸ್ ನಲ್ಲಿ ಇದ್ದಾರೆ.. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಗೆದ್ದಿರುವ ಸಂಖ್ಯೆಯ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡಬೇಕು ಎಂದು ಲಿಂಗಾಯತ ನಾಯಕ ಪ್ರಕಾಶ್ ಖಂಡ್ರೆ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ
ತಾನೊಬ್ಬನೇ ಉಪಮುಖ್ಯಮಂತ್ರಿ ಆಗಬೇಕು ಎಂಬ ಡಿ.ಕೆ. ಶಿವಕುಮಾರ್ ಅವರ ವಾದಕ್ಕೆ ಇತರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ತುಂಬ ಸ್ವಾರ್ಥದಿಂದ ಕೂಡಿದ ನಡವಳಿಕೆ. ಕಾಂಗ್ರೆಸ್‌ನ್ನು ಬೆಂಬಲಿಸಿದ ಸಮುದಾಯಗಳಿಗೆ ಅವಕಾಶ ಕೊಡಬೇಕು ಎಂಬ ವಾದವನ್ನು ಮಂಡಿಸಲಾಗಿದೆ.
ಈ ವಾದ, ಬೇಡಿಕೆಗಳು ಮುಂದಿನ ಎರಡು ದಿನಗಳ ಕಾಲ ಕಾಂಗ್ರೆಸ್‌ನಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕುವುದು ಖಚಿತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲೂ ಈ ವಿಚಾರ ಚರ್ಚೆಯಾಗುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ: Karnataka Election : ನನಗೂ ಡಿಸಿಎಂ ಸ್ಥಾನ ಬೇಕು; ಜಿ. ಪರಮೇಶ್ವರ್ ಹಕ್ಕು ಮಂಡನೆ, ಡಿಕೆಶಿ ವಿರುದ್ಧ ಆಕ್ರೋಶ