ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಕಗ್ಗಂಟು ಹೈಕಮಾಂಡ್ ಮಟ್ಟದಲ್ಲಿ ಪರಿಹಾರವಾಗಿದ್ದು, ಸಿದ್ದರಾಮಯ್ಯ ಅವರ ಆಯ್ಕೆ ಖಚಿತವಾಗಿದೆ. ಇಂದು ಅಧಿಕೃತವಾಗಿ ಅವರ ಹೆಸರು ಘೋಷಣೆಯಾಗಲಿದೆ. ಕ್ಷಣಕ್ಷಣದ ಸುದ್ದಿಗಳು ಇಲ್ಲಿ ಬರಲಿವೆ.
ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿತಮ್ಮನ್ನು ಆಯ್ಕೆ ನಾಯಕನಾಗಿ ಆಯ್ಕೆಮಾಡಿದ ಎಲ್ಲ ಶಾಸಕರಿಗೆ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವೀಕ್ಷಕರಾದ ಸುಶೀಲ್ ಕುಮಾರ್ ಶಿಂದೆ, ಜೀತೇಂದ್ರ ಸಿಂಗ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕ, ನಿಯೋಜಿತ ಸಿಎಂ ಸಿದ್ದರಾಮಯ್ಯ, ನಿಯೋಜಿತ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ನಾಯಕ ಬಿ ಕೆ ಹರಿಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
ನಿರ್ಣಯ ಮಂಡಿಸಿದ್ದು ಡಿಕೆಶಿ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವ ನಿರ್ಣಯವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.
ಸಿದ್ದರಾಮಯ್ಯ ಆಯ್ಕೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ ನಂತರ ಅವರು ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗಣ್ಯರು
ಶನಿವಾರ ನಡೆಯಲಿರುವ ಪ್ರಮಾಣ ವಚನಕ್ಕೆ ಕಾರ್ಯಕ್ರಮದಲ್ಲಿ ದೇಶದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಮಮತಾ ಬ್ಯಾನರ್ಜಿ ( ಪಶ್ಚಿಮ ಬಂಗಾಳ), ಅಶೋಕ್ ಗೆಹಲೋಟ್ (ರಾಜಸ್ಥಾನ), ಭೂಪೇಶ್ ಭಗೇಲ್ (ಛತ್ತೀಸ್ ಗಢ), ನಿತೀಶ್ ಕುಮಾರ್ (ಬಿಹಾರ), ಸುಖವೀಂದರ್ ಸುಕ್ಕ (ಹಿಮಾಚಲ ಪ್ರದೇಶ), ರಂಗಸ್ವಾಮಿ (ಪುದುಚೇರಿ), ಎಂ. ಕೆ ಸ್ಟಾಲಿನ್ (ತಮಿಳುನಾಡು) ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರಲ್ಲದೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಉಪಸ್ಥಿತರಿರಲಿದ್ದಾರೆ.
ಸಭೆಯಲ್ಲಿ ಸುರ್ಜೇವಾಲಾ ಮಾತು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡುತ್ತಿದ್ದಾರೆ.