ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಕಗ್ಗಂಟು ಹೈಕಮಾಂಡ್ ಮಟ್ಟದಲ್ಲಿ ಪರಿಹಾರವಾಗಿದ್ದು, ಸಿದ್ದರಾಮಯ್ಯ ಅವರ ಆಯ್ಕೆ ಖಚಿತವಾಗಿದೆ. ಇಂದು ಅಧಿಕೃತವಾಗಿ ಅವರ ಹೆಸರು ಘೋಷಣೆಯಾಗಲಿದೆ. ಕ್ಷಣಕ್ಷಣದ ಸುದ್ದಿಗಳು ಇಲ್ಲಿ ಬರಲಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುರು
ಕೆಪಿಸಿಸಿ ಕಚೇರಿಯಲ್ಲಿ ನಡೆಯಬೇಕಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿದ್ದು, ಸಭೆಯು ಆರಂಭಗೊಂಡಿದೆ.
ಸಭೆಯಲ್ಲಿ ಪಕ್ಷದ ಹೈಕಮಾಂಡ್‌ನ ತೀರ್ಮಾನವನ್ನು ಒಪ್ಪುವ ಕುರಿತು ನಿರ್ಣಯತೆಗೆದುಕೊಂಡು, ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ.
ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ
ಕೆಪಿಸಿಸಿಯ ಕಚೇರಿಯಲ್ಲಿ ನಡೆಯಬೇಕಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಆಗಮಿಸುತ್ತಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇನ್ನು ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದು, ಸಭೆ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಿದ್ದರಾಮಯ್ಯ ನಾಳೆ ದೆಹಲಿಗೆ
ಈಗಷ್ಟೇ ದೆಹಲಿಯಿಂದ ಹಿಂದಿರುಗಿರುವ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ನೇಮಕದ ಕುರಿತು ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಶುಕ್ರವಾರ ದೆಹಲಿಗೆ ತೆರಳುವುದು ಖಚಿತ ಪಟ್ಟಿದೆ.
ಬೆಳಿಗ್ಗೆ 9 ಗಂಟೆಗೆ ಅವರು ದೆಹಲಿಗೆ ತೆರಳಲಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿ ಯೊಂದಿಗೆ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ನಿವಾಸಕ್ಕೆ ಡಿಕೆ ಶಿವಕುಮಾರ್
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ನಿಯೋಜಿತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಮನೆಗೆ ಆಗಮಿಸಿದ್ದಾರೆ.
ಅವರನ್ನು ಮಗಳು ಐಶ್ವರ್ಯ ಮತ್ತು ಅಳಿಯ ಅಮಾರ್ಥ್ಯ ಹೆಗ್ಡೆ ಸ್ವಾಗತಿಸಿದರು.
ಮಾಜಿ ಸಚಿವ ಪ್ರಿಯಾಂಕ ಖರ್ಗೆ ಕೂಡ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸರ್ಕಾರಿ ನಿವಾಸಕ್ಕೆ ಸಿದ್ದರಾಮಯ್ಯ
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ನಿಯೋಜಿತ ಸಿಎಂ ಸಿದ್ದರಾಮಯ್ಯ ತಾವು ವಾಸವಾಗಿದ್ದ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದಾರೆ.
ಶಿವಾನಂದ ಸರ್ಕಲ್ ಬಳಿ ಇರುವ ನಿವಾಸಕ್ಕೆ ಆಗಮಿಸಿದ ಅವರನ್ನು ಕುಟುಂಬದ ಸದಸ್ಯರು ಸ್ವಾಗತಿಸಿದರು.