ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಕಗ್ಗಂಟು ಹೈಕಮಾಂಡ್ ಮಟ್ಟದಲ್ಲಿ ಪರಿಹಾರವಾಗಿದ್ದು, ಸಿದ್ದರಾಮಯ್ಯ ಅವರ ಆಯ್ಕೆ ಖಚಿತವಾಗಿದೆ. ಇಂದು ಅಧಿಕೃತವಾಗಿ ಅವರ ಹೆಸರು ಘೋಷಣೆಯಾಗಲಿದೆ. ಕ್ಷಣಕ್ಷಣದ ಸುದ್ದಿಗಳು ಇಲ್ಲಿ ಬರಲಿವೆ.
ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್
ಪ್ರತ್ಯೇಕ ವಿಮಾನದಲ್ಲಿ ಬರಲು ಉದ್ದೇಶಿಸಿದ್ದ ಅವರನ್ನು ಒಂದೇ ವಿಮಾನದಲ್ಲಿ ಕಳುಹಿಸಿದ್ದು ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ, ಡಿಕೆಶಿ
ಮುಖ್ಯಮಂತ್ರಿಯ ಆಯ್ಕೆಗಾಗಿ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಅನೇಕ ಕಲಾತಂಡಗಳು, ಸಾವಿರಾರು ಅಭಿಮಾನಿಗಳು ಸೇರಿದ್ದಾರೆ.
ಸಂಜೆ 7 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಘೋಷಿಸಲಾಗುತ್ತದೆ. ನಂತರ ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ವಿಶೇಷ ವಿಮಾನದಲ್ಲಿ ಕಾಂಗ್ರೆಸ್ ನಾಯಕರು
ಇಂದು ಸಂಜೆ ಕೆಪಿಸಿಸಿ ಶಾಸಕಾಂಗ ಪಕ್ಷದ ಸಭೆ ನಡೆಯಲಿರುವುದರಿಂದ ದೆಹಲಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.
ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ: ಡಿಕೆಶಿ
ಬೆಂಗಳೂರಿಗೆ ಹೊರಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಸೂತ್ರದ ಕುರಿತು ಕೇಳಿದ ಪ್ರಶ್ನೆಗಳಿಗೆ ʻʻಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆʼʼ ಎಂದು ಮಾರ್ಮಿಕವಾದ ಉತ್ತರ ನೀಡಿದ್ದಾರೆ.
ಪತ್ರಕರ್ತರು, ನೀವು ಮತ್ತೆ ಮುಖ್ಯಮಂತ್ರಿ ಆಗ್ತಿರಾ?, 2.5 ವರ್ಷ ಆದ್ಮೇಲೆ ಮತ್ತೆ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ?, ಸೋನಿಯಾ ಗಾಂಧಿ ನಿಮಗೆ ಆಶೀರ್ವಾದ ಮಾಡಲಿಲ್ಲವಾ?, ನಿಮಗೆ ಅನ್ಯಾಯ ಆಯ್ತಾ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರಿಸದೇ, ಕೇವಲ ನಗುತ್ತಲೇ ಮುಂದೆ ಸಾಗಿದ್ದಾರೆ.
ಬೆಂಗಳೂರಿಗೆ ಹಿಂದಿರುಗುತ್ತಿರುವ ಡಿಕೆಶಿ
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ.