ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಕಗ್ಗಂಟು ಹೈಕಮಾಂಡ್ ಮಟ್ಟದಲ್ಲಿ ಪರಿಹಾರವಾಗಿದ್ದು, ಸಿದ್ದರಾಮಯ್ಯ ಅವರ ಆಯ್ಕೆ ಖಚಿತವಾಗಿದೆ. ಇಂದು ಅಧಿಕೃತವಾಗಿ ಅವರ ಹೆಸರು ಘೋಷಣೆಯಾಗಲಿದೆ. ಕ್ಷಣಕ್ಷಣದ ಸುದ್ದಿಗಳು ಇಲ್ಲಿ ಬರಲಿವೆ.
ಸಚಿವ ಸ್ಥಾನಕ್ಕೆ ಲಾಬಿ ಶುರು
ಮುಖ್ಯಮಂತ್ರಿ ಆಯ್ಕೆ ಅಂತಿಮಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ.
ಅನೇಕ ನಾಯಕರು ಈಗಾಗಲೇ ಸಿದ್ದರಾಮಯ್ಯರನ್ನು ಸಂಪರ್ಕಿಸಲು ಆರಂಭಿಸಿದ್ದಾರೆ.
ಹೈಕಮಾಂಡ್ ಆದೇಶಕ್ಕೆ ಬದ್ಧ; ಅಧಿಕಾರ ಹಂಚಿ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High command) ನೀಡಿದ ಆದೇಶವನ್ನು ಮೀರುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮತ್ತು ಗಾಂಧಿ ಕುಟುಂಬದ (Gandhi family) ಗೌರವ ನೀಡಿ ಅಧಿಕಾರ ಹಂಚಿಕೆ ಫಾರ್ಮುಲಾ ಒಪ್ಪಿಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಸೃಷ್ಟಿಯಾಗಿದ್ದ ಕಗ್ಗಂಟು ಪರಿಹಾರವಾಗಿದೆ.
ವೇಣುಗೋಪಾಲ್ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ರಾಜಕೀಯ
ಹೊಸದಿಲ್ಲಿ: ಸಿಎಂ ಹೆಸರು ಅಂತಿಮ ಘೋಷಣೆಗೆ ಮುನ್ನ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ಗೆ ರಾಜ್ಯ ನಾಯಕರನ್ನು ಕರೆಯಲಾಗಿದೆ. ಈ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಭಾಗವಹಿಸಲಿದ್ದು, ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.
ರಾಮನಗರದಲ್ಲಿ ಕಾರ್ಯಕರ್ತರ ಮೌನ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೈತಪ್ಪುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಸಂಭ್ರಮಾಚರಣೆ ಮಾಡದೇ ಕಾರ್ಯಕರ್ತರು ಮೌನ ವಹಿಸಿರುವುದು ಕಂಡುಬಂದಿದೆ. ಡಿಕೆಶಿಗೆ ಡಿಸಿಎಂ ಸ್ಥಾನ ಸಿಕ್ಕಿದ್ರೂ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಕಂಡುಬಂದಿಲ್ಲ.
ಬೆಳಗ್ಗೆ 10 ಗಂಟೆಗೆ ಎಐಸಿಸಿ ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಘೋಷಣೆಯ ಕುರಿತು ಇಂದು 10 ಗಂಟೆಗೆ ಎಐಸಿಸಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ಎಐಸಿಸಿ ಅಧ್ಯಕ್ಷರು ಇದರಲ್ಲಿ ಭಾಗಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸಲಿದ್ದಾರೆ.