ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆಲುವು ಸಾಧಿಸಿದ ಕಾಂಗ್ರೆಸ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಮುಖ್ಯಮಂತ್ರಿ (Karnataka CM), ಉಪಮುಖ್ಯಮಂತ್ರಿ ಮತ್ತು ಎಂಟು ಸಚಿವರೊಂದಿಗೆ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದೆಯಾದರೂ ಖಾತೆ ಹಂಚಿಕೆಯಾಗದೆ ಯಾರು ಯಾವ ಕೆಲಸ ಮಾಡಬೇಕು ಎನ್ನುವುದು ನಿಗದಿಯಾಗಿಲ್ಲ. ಸೋಮವಾರದಿಂದ ಅಧಿವೇಶನ ಆರಂಭಗೊಂಡು ಶಾಸಕರ ಪ್ರಮಾಣವಚನ ಆರಂಭಗೊಂಡಿದ್ದರೂ ಕೆಲಸ ಮುಂದೆ ಸಾಗುತ್ತಿಲ್ಲ. ಈ ನಡುವೆ ಸಚಿವರು ತಮ್ಮ ಸಂಭಾವ್ಯ ಇಲಾಖೆಗಳತ್ತ ಗಮನ ಹರಿಸಲು ಶುರು ಮಾಡಿರುವ ಮಾಹಿತಿ ಬಂದಿದೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಸಿಎಂ, ಡಿಸಿಎಂ ಮತ್ತು ಕನಿಷ್ಠ 28 ಸಚಿವರು ಪ್ರಮಾಣವಚನ ಸ್ವೀಕರಿಸುವ ಪ್ರಸ್ತಾಪವಿತ್ತು. ಆದರೆ, ಸಚಿವರ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪಟ್ಟಿ ಫೈನಲ್ ಆಗದೆ ಶನಿವಾರ ಕೇವಲ ಎಂಟು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಯಿತು.
ಪ್ರಮಾಣವಚನ ಸ್ವೀಕಾರವೇನೋ ನಡೆಯಿತು. ಆದರೆ, ಸಚಿವರಿಗೆ ಯಾವ ಖಾತೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆದು ಬಳಿಕ ಜತೆಯಾಗಿ ಖಾತೆ ಹಂಚಿಕೆ ಮಾಡುವ ಪ್ಲ್ಯಾನ್‌ನಲ್ಲಿ ನಾಯಕರಿದ್ದಾರೆ. ಆದರೆ, ಸೋಮವಾರ, ಮಂಗಳವಾರ ಮತ್ತು ಬುಧವಾರ ಅಧಿವೇಶನ ಇರುವುದರಿಂದ ಸಂಪುಟ ವಿಸ್ತರಣೆಗೆ ಬೇಕಾಗಿರುವ ದಿಲ್ಲಿ ಭೇಟಿ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಮುಂದಿನ ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದಿಲ್ಲಿಗೆ ಭೇಟಿ ನೀಡಿ ಹೈಕಮಾಂಡ್ ಜತೆ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಕೆಲವೊಂದು ಪ್ರಮುಖ ನಾಯಕರಿಗೆ ಸ್ಥಾನ ನೀಡಬೇಕು/ನೀಡಬಾರದು ಎಂಬ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಇರುವುದು ಬೆಳಕಿಗೆ ಬಂದಿದೆ.
ಸಿದ್ದರಾಮಯ್ಯ ಅವರು ಹಿರಿತನದ ಆಧಾರದಲ್ಲಿ ಕೆಲವರಿಗೆ ಸ್ಥಾನ ಬೇಕು ಎಂದರೆ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಯಾರು ದುಡಿದಿದ್ದಾರೋ ಅವರಿಗೆ ಮಾತ್ರ ಸ್ಥಾನ ಎನ್ನುವ ಪಟ್ಟು ಹಿಡಿದಿದ್ದಾರೆ. ಇವರ ಈ ಜಗಳವನ್ನು ಹೈಕಮಾಂಡ್ ಬಗೆಹರಿಸಬೇಕಾಗಿದೆ. ಬುಧವಾರ ನಡೆಯುವ ಹೈಕಮಾಂಡ್ ಮಟ್ಟದ ಸಭೆಯಲ್ಲಿ ಇದಕ್ಕೊಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇದೆ.
ಇದರ ನಡುವೆಯೇ ಈಗ ಅಧಿಕಾರ ಸ್ವೀಕರಿಸಿರುವ ಸಚಿವರು ತಾವು ಬಯಸಿದ ಅಥವಾ ಒಂದು ಮಟ್ಟದಲ್ಲಿ ಅವರಿಗೆ ಕೊಡಬಹುದು ಎಂಬ ನಿರೀಕ್ಷೆ ಇರುವ ಖಾತೆಗಳ ಅಡಿ ಬರುವ ಇಲಾಖೆಗಳ ಮೇಲೆ ಗಮನ ಹರಿಸಿದ್ದಾರೆ ಎಂದು ಹೇಳಲಾಗಿದೆ.
ನೂತನ ಸಚಿವರ ಸಂಭಾವ್ಯ ಖಾತೆಗಳು ಹೀಗಿವೆ
ಡಿ.ಕೆ ಶಿವಕುಮಾರ್ – ಡಿಸಿಎಂ, ನೀರಾವರಿ, ಇಂಧನ ಇಲಾಖೆ
ಎಂ.ಬಿ ಪಾಟೀಲ್ – ಗೃಹ ಇಲಾಖೆ
ಕೆ.ಎಚ್ ಮುನಿಯಪ್ಪ – ಕಂದಾಯ ಇಲಾಖೆ
ರಾಮಲಿಂಗಾ ರೆಡ್ಡಿ – ಲೋಕೋಪಯೋಗಿ ಇಲಾಖೆ
ಪ್ರಿಯಾಂಕ್ ಖರ್ಗೆ – ಉನ್ನತ ಶಿಕ್ಷಣ, ಐಟಿ ಬಿಟಿ
ಸತೀಶ್ ಜಾರಕಿಹೊಳಿ – ಸಮಾಜ ಕಲ್ಯಾಣ ಸಾಧ್ಯತೆ
ಪರಮೇಶ್ವರ್ .. ಬೃಹತ್ ಕೈಗಾರಿಕೆ/ ನಗರಾಭಿವೃದ್ಧಿ ಇಲಾಖೆ
ಕೆ.ಜೆ ಜಾರ್ಜ್ – ನಗರಾಭಿವೃದ್ಧಿ/ ಬೆಂಗಳೂರು ಉಸ್ತುವಾರಿ