ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಎಂದು ಶಾಸಕರು ಒಂದು ಸಾಲಿನ ನಿರ್ಣಯ ಕೈಗೊಂಡಿದ್ದಾರೆ. ನಾನು ದಿಲ್ಲಿಗೆ ಹೋಗುವುದಿಲ್ಲ. ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಿದ್ದೇನೆ, ಬೆಂಬಲಿಗರನ್ನು ಭೇಟಿಯಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಈ ನಡುವೆ ಸಿದ್ದರಾಮಯ್ಯ (siddaramaiah) ಅವರು ದಿಲ್ಲಿಗೆ ಹೊರಡಲು ಸನ್ನದ್ಧರಾಗಿದ್ದಾರೆ. ಈ ನಡುವೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕರ ಪರ ಜಯಘೋಷ ಮೊಳಗಿಸುತ್ತಿದ್ದಾರೆ.
ʼʼನಾವು ನಿನ್ನೆಯ ಸಭೆಯಲ್ಲಿ ಒನ್‌ಲೈನ್ ಅಜೆಂಡಾ ಪಾಸ್ ಮಾಡಿದ್ದೇವೆ. ಸಿಎಂ ಆಯ್ಕೆ (Karnataka CM) ನಿರ್ಧಾರವನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಕಾಂಗ್ರೆಸ್ ಸಂಪ್ರದಾಯದಂತೆ ಅಭಿಪ್ರಾಯ ತಿಳಿದುಕೊಂಡಿದ್ದೇವೆʼʼ ಎಂದವರು ಹೇಳಿದ್ದಾರೆ.
ಹುಟ್ಟಿದ ಹಬ್ಬದ ದಿನ ಡಿಕೆಶಿಗೆ ಹೈಕಮಾಂಡ್ ಮಹತ್ವದ ಗಿಫ್ಟ್ ಕೊಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼʼನನಗೆ ಗಿಫ್ಟ್ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ರಾಜ್ಯದ ಜನ ವಿಶ್ವಾಸ ಇಟ್ಟಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ನಾನು ಯಾವೆಲ್ಲ ಕೆಲಸ ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿದ್ದೇನೆ. ಡಬಲ್ ಎಂಜಿನ್ ಸರ್ಕಾರದಿಂದ ನನಗೆ ಸಾಕಷ್ಟು ನೋವುಗಳಾಗಿವೆ. ಇದೆಲ್ಲವನ್ನೂ ಹೈಕಮಾಂಡ್ ಗಮನಿಸಬೇಕಾಗುತ್ತದೆʼʼ ಎಂದು ಡಿಕೆಶಿ ಸೂಚ್ಯವಾಗಿ ನುಡಿದಿದ್ದಾರೆ.
ಸಿದ್ದರಾಮಯ್ಯ ದೆಹಲಿಗೆ
ಈ ನಡುವೆ ಸಿದ್ದರಾಮಯ್ಯ ಅವರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು, ಅವರು ಇನ್ನು ಕೆಲವೇ ಗಂಟೆಗಳಲ್ಲಿ ದೆಹಲಿಗೆ ತೆರಳಲಿದ್ದಾರೆ. ಸೋಮವಾರ ಮಧ್ಯಾಹ್ನ 1.45ಕ್ಕೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ತೆರಳಲಿದ್ದಾರೆ. ಅಲ್ಲಿಯವರೆಗೆ ಮನೆಯಲ್ಲೇ ಇದ್ದು ಸಿಎಂ ಸ್ಥಾನ ಸಂಬಂಧ ತಂತ್ರಗಾರಿಕೆ ನಡೆಸಲಿದ್ದಾರೆ.
ದೆಹಲಿಗೆ ತೆರಳಿದ ಎಐಸಿಸಿ ವೀಕ್ಷಕರ ತಂಡ
ಸಿಎಂ ಸ್ಥಾನದ ಬಗ್ಗೆ ಶಾಸಕರ ಅಭಿಮತ ತಿಳಿಯಲು ಬಂದಿದ್ದ ಎಐಸಿಸಿ ವೀಕ್ಷಕರ ತಂಡ ದೆಹಲಿಗೆ ಮರಳಿದೆ. ನಿನ್ನೆ ಶಾಸಕಾಂಗದ ಅಭಿಪ್ರಾಯ ಪಡೆದಿದ್ದ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ತಂಡ ಇಂದು ದೆಹಲಿಗೆ ಪ್ರಯಾಣ ಮಾಡಿದೆ.
ಆಯ್ಕೆ ಹೊಣೆ ಹೈಕಮಾಂಡ್‌ಗೇ ಬಿಟ್ಟ ಶಾಸಕರು
ಶೇ.50ರಷ್ಟು ಶಾಸಕರು ಸಿಎಂ ಆಯ್ಕೆ ನಿರ್ಧಾರ ಹೈಕಮಾಂಡ್‌ಗೇ ಬಿಟ್ಟಿದ್ದೇವೆ ಎಂದು ವೀಕ್ಷಕರ ತಂಡದ ಮುಂದೆ ಹೇಳಿದ್ದಾರೆ. ಶಾಸಕರ ಈ ನಡೆಯಿಂದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ಗೆ ಅಚ್ಚರಿಯಾಗಿದೆ ಎನ್ನಲಾಗಿದೆ. ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ʼಲೆಫ್ಟ್ ಟೂ ದಿ ಹೈಕಮಾಂಡ್ʼ ಎಂಬ ಒಂದು ಸಾಲಿನ ನಿರ್ಣಯಕ್ಕೆ 50% ವೋಟಿಂಗ್ ಆಗಿದೆ. ಮುಂದೆ ಯಾರಾಗುತ್ತಾರೋ ಗೊತ್ತಿಲ್ಲದಿರುವುದರಿಂದ ಅನಗತ್ಯ ಗೊಂದಲ ಬೇಡ ಎನ್ನುವ ನಿಲುವಿಗೆ ಹೆಚ್ಚಿನ ಶಾಸಕರು ಬಂದಿದ್ದು, ಹೈಕಮಾಂಡ್ ಹೇಳಿದಂತೆ ಆಗಲಿ ಎಂದಿದ್ದಾರೆ.
ಇದನ್ನೂ ಓದಿ: Karnataka CM: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ: ವಿವಿಧ ಮಠಾಧೀಶರ ಒತ್ತಡ