ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ (Karnataka CM) ಯಾರು ಎಂಬ ವಿಚಾರದಲ್ಲಿ ಹೈಕಮಾಂಡ್ (Congress High command) ಮಟ್ಟದಲ್ಲಿ ಇನ್ನೂ ತೀವ್ರ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸಿದ್ದರಾಮಯ್ಯ (Siddaramaiah) ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದೆ ಎಂಬ ಸುಳ್ಳು ಮಾಹಿತಿಯನ್ನು ಹರಿಬಿಟ್ಟ ಇಬ್ಬರು ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿದೆ.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪುಷ್ಪಾ ಅಮರನಾಥ್ (Pushpa Amarnath), ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಎಂ. ಪಟ್ಟಣ್ (Ashok M Pattan) ಅವರಿಗೆ ನೋಟಿಸ್ ನೀಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ, ಸಮಾಲೋಚನೆಗಳು ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಮಾತುಕತೆ ನಡೆಸುತ್ತಿದ್ದಾರೆ.
ಇದೆಲ್ಲವೂ ನಡೆಯುತ್ತಿರುವ ನಡುವೆಯೇ ದಿಲ್ಲಿಯಲ್ಲಿ ತಮ್ಮ ನಾಯಕರ ಜತೆಗೆ ಇರುವ ಕೆಲವು ಮುಖಂಡರು ತಪ್ಪು ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ.
ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವುದನ್ನು ಘೋಷಣೆ ಮಾಡಬೇಕಾಗಿರುವುದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ. ಆದರೆ, ಈ ಕುರಿತ ಮಾತುಕತೆಗಳು ಇನ್ನೂ ಅಂತಿಮ ಹಂತ ತಲುಪದಿರುವ ಹೊತ್ತಿನಲ್ಲೇ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತು ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಅಶೋಕ್ ಪಟ್ಟಣ್ ಅವರು ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ತೀರ್ಮಾನವಾಗಿದೆ ಎಂದು ಘೋಷಿಸಿದ್ದರು.
ಪುಷ್ಪಾ ಅಮರನಾಥ್ ಮತ್ತು ಅಶೋಕ್ ಪಟ್ಟಣ ಅವರಿಗೆ ನೋಟಿಸ್ ನೀಡುವಂತೆ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Karnataka CM: ರಾಹುಲ್, ಖರ್ಗೆ ಜತೆ 4 ಗಂಟೆ ಮಾತುಕತೆ; ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್