ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷೆಯನ್ನೂ ಮೀರಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಸಿಎಂ ಆಯ್ಕೆ ಮಾಡಲು ಎಐಸಿಸಿ ಸುಸ್ತಾಗುತ್ತಿದೆ. ಇಬ್ಬರು ಪ್ರಬಲ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೈಯಕ್ತಿಕ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ.
ಇಬ್ಬರ ಎದುರು ಹೈಕಮಾಂಡ್ 50:50 ಸೂತ್ರ ಇಟ್ಟಿತ್ತು. ಅಂದರೆ ಪ್ರಾರಂಭದ ಅರ್ಧ ಅವಧಿ, ನಂತರದ ಅರ್ಧ ಅವಧಿ ಇಬ್ಬರಿಗೂ ಹಂಚುವ ತೀರ್ಮಾನ ಮಾಡಿತ್ತು. ಆದರೆ ತಮ್ಮ ಅವಧಿ ಮುಗಿದ ನಂತರ ಸಿದ್ದರಾಮಯ್ಯ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸ ಡಿ.ಕೆ. ಶಿವಕುಮಾರ್‌ಗೆ ಇಲ್ಲ ಎನ್ನಲಾಗಿದೆ. ಅದಕ್ಕಾಗಿಯೇ, 50:50 ಬೇಡ. ಕೊಟ್ಟರೆ ಸಂಪೂರ್ಣ 60 ತಿಂಗಳು ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಅದೇ ರೀತಿ ಸಿದ್ದರಾಮಯ್ಯ ಪ್ರಾರಂಭದಲ್ಲಿ 50:50ಕ್ಕೆ ಒಕೆ ಮಾಡಬಹುದು ಎಂಬಂತೆ ಇದ್ದವರು ಈಗ ಸಂಪೂರ್ಣ ಐದು ವರ್ಷ ಅಂದರೆ 60 ತಿಂಗಳು ಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಎದುರು ಪ್ರಸ್ತಾವನೆ ಇಟ್ಟಿದ್ದಾರೆ. ಇಬ್ಬರೂ ನಾಯಕರು 60 ತಿಂಗಳ ಅಧಿಕಾರವನ್ನೇ ಕೇಳುತ್ತಿರುವುದು ಈಗ ಹೈಕಮಾಂಡ್‌ಗೆ ಹೊಸ ಸಂಕಷ್ಟ ತಂದಿಟ್ಟಿದೆ.
ಅದಕ್ಕಾಗಿಯೇ ಇಬ್ಬರಿಂದಲೂ ಗುಪ್ತ ವರದಿಯನ್ನು ಎಐಸಿಸಿ ತರಿಸಿಕೊಂಡಿದೆ. ತಮ್ಮನ್ನು ಏಕೆ ಸಿಎಂ ಮಾಡಬೇಕು? ಎಂಬ ಕುರಿತು ವರದಿ ನೀಡುವಂತೆ ತಿಳಿಸಿತ್ತು. ಅದರಂತೆ ಇಬ್ಬರೂ ಸಿಎಂ ಆಕಾಂಕ್ಷಿಗಳಿಂದ ಖರ್ಗೆಗೆ ವಿಶೇಷ ವರದಿ ಸಲ್ಲಿಕೆ ಮಾಡಲಾಗಿದೆ. ತಮ್ಮ ಸಾಧನೆ, ತಮಗೆ ಸಿಎಂ ಯಾಕೆ ಕೊಡಬೇಕು, ಅದಕ್ಕೆ ಪ್ರಮುಖ ಕಾರಣ ಏನು ಎಂಬ ಬಗ್ಗೆ ಖರ್ಗೆಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಪಕ್ಷ ಸಂಘಟನೆ, ಈ ಬಾರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದು, ಜೊತೆಗಿರುವ ಶಾಸಕರ ಸಪ್ಪೋರ್ಟ್, ಜನ ಬೆಂಬಲ, ಹಳೇ ಮೈಸೂರು ಭಾಗದಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದು, ಸಿಎಂ ಆದ್ರೆ ಲೋಕಸಭಾ ಚುನಾವಣೆಗೆ ಹೇಗೆ ಕೆಲಸ ಮಾಡ್ತೀನಿ ಸೇರಿದಂತೆ ಇನ್ನಷ್ಟು ಪಾಸಿಟಿವ್ ಅಂಶಗಳನ್ನ ಸೇರಿಸಿ ಡಿ. ಕೆ. ಶಿವಕುಮಾರ್ ವರದಿ ನೀಡಿದ್ದಾರೆ.
ಇನ್ನುಳಿದಂತೆ ಸಿದ್ದರಾಮಯ್ಯ ಸಹ ತಮ್ಮ ಪರವಾಗಿನ ಪಾಸಿಟಿವ್ ಅಂಶಗಳನ್ನು ಬಗ್ಗೆ ವರದಿ ನೀಡಿದ್ದಾರೆ. ಶಾಸಕರ ಬೆಂಬಲ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕರ್ತವ್ಯ ನಿರ್ವಹಿಸಿದ್ದ ರೀತಿ, ರಾಜ್ಯವ್ಯಾಪಿ ಜನ ಬೆಂಬಲ ಸೇರಿದಂತೆ ಹಲವು ಅಂಶಗಳನ್ನೂಳಗೊಂಡ ರಿಪೋರ್ಟ್ ನೀಡಿದ್ದಾರೆ.
ಇನ್ನುಳಿದಂತೆ ಸಿದ್ದರಾಮಯ್ಯಗೆ ಯಾಕೆ ಸಿಎಂ ಪಟ್ಟ ನೀಡಬಾರದು ಎಂಬ ಬಗ್ಗೆಯೂ ಡಿ. ಕೆ. ಶಿವಕುಮಾರ್ ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಈಗಾಗಲೆ ಅವರು ಸಿಎಂ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವಾಗ ನಾವು ಏನೂ ಮಾತಾಡಿಲ್ಲ. ಈ ಬಾರಿ ನಾನು ಪಕ್ಷ ಸಂಘಟನೆ ಮಾಡಿದ್ದೇನೆ, ಸಿದ್ದರಾಮಯ್ಯ ರಾಜ್ಯ ಪ್ರವಾಸ ನನ್ನಷ್ಟು ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನನಗೆ ಸಿಎಂ ಸ್ಥಾನ ಕೊಟ್ರೆ 5 ವರ್ಷ ಸಂಪೂರ್ಣ ಕೊಡಿ. ಈ ತೀರ್ಮಾನದಿಂದ ನಾನು ಹಿಂದೆ ಸರಿಯೋಲ್ಲ. ನನ್ನ ತೀರ್ಮಾನ ಸ್ಪಷ್ಟವಾಗಿದೆ. ಸಿಎಂ ಸ್ಥಾನ ಬೇಕು, ಅದೂ ಸಹ ಸಂಪೂರ್ಣ ಅವಧಿಗೆ ಎಂದು ಖರ್ಗೆ ಬಳಿ ಹೇಳಿದ್ದಾರೆ. ಸಿಎಂ ವಿಚಾರವಾಗಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನ ಕರೆಸಿ ಖರ್ಗೆ ಸಭೆ ಮಾಡಿದ್ದಾರೆ.
ನನಗೆ ಕೊಟ್ಟರೆ ಸಿಎಂ ಸ್ಥಾನ ಕೊಡಿ ಇಲ್ಲಾ ಅಂದ್ರೆ ಶಾಸಕನಾಗಿಯೇ ಇರ್ತೀನಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರೆ, ಇನ್ನೊಂದೆಡೆ ಈ ಬಾರಿ ಮುಖ್ಯಮಂತ್ರಿ ಸ್ಥಾನ ನನಗೆ ಬೇಕು, ಸಂಪೂರ್ಣ ಅಧಿಕಾರ ನಾನೇ ಮಾಡ್ತೇನೆ ಎಂದು ಸಿದ್ದರಾಮಯ್ಯ ಸಹ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗೇ ಆಗ್ತಾನೆ; ಇಲ್ಲದಿದ್ದರೆ ಮೀಸೆ ಬೋಳಿಸ್ತೀನಿ ಅಂದ ಮೀಸೆಯೇ ಇಲ್ಲದ 3 ವರ್ಷದ ಬಾಲಕ!