ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಿದ್ದಂತೆ ಅವರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಸಿದ್ದರಾಮಯ್ಯ ಸಿಎಂ ಗಾದಿ ಕಗ್ಗಂಟು ಆಗಿದ್ದರಿಂದ ಸಿದ್ದರಾಮನಹುಂಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ವೇಳೆ ಅರ್ಚಕರಿಂದ ಕುಲದೈವ ಶ್ರೀ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿ, ಈಡುಗಾಯಿ ಒಡೆಸಲಾಯಿತು.
ಜೋಡಿ ಟಗರು ಉಡುಗೂರೆ
ಸಿದ್ದರಾಮಯ್ಯ ತವರೂರಲ್ಲಿ ಸಂಭ್ರಮ-ಸಡಗರ ಜೋರಾಗಿದೆ. ಕಡವೆಕಟ್ಟೆ ಹುಂಡಿ ಗ್ರಾಮದ ನಿವಾಸಿಗಳಾದ ಮಹದೇವು, ಚಂದ್ರು ಅವರು ಜೋಡಿ ಟಗರು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಪ್ರಶ್ನಿಸಿ ವೈರಲ್ ಆಗಿದ್ದ ಚಂದ್ರು, ಈಗ ಡಬಲ್ ಎಂಜಿನ್ ಚಂದ್ರು ಎಂದೇ ಪ್ರಸಿದ್ಧಿ ಆಗಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರು, ಸಿದ್ದರಾಮಯ್ಯ ಅವರು ಅನ್ನಭಾಗ್ಯದ ಮೂಲಕ ಬಡವರು ಅನ್ನ ತಿಂದು ಜೀವನ ಮಾಡುವಂತಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ನಮಗೆ ಏನೂ ಪ್ರಯೋಜನ ಆಗಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಚಿನ್ನ, ದುಡ್ಡು ಕೊಡಲು ಆಗುವುದಿಲ್ಲ. ಯಾಕೆಂದರೆ ನಾವು ಬಡವರು. ಹೀಗಾಗಿ ನಾವು ಸಾಕಿದ್ದ ಟಗರನ್ನೇ ಅವರಿಗೆ ಉಡುಗೊರೆಯಾಗಿ ಕೊಡುತ್ತೇವೆ ಎಂದರು.
ಕೋಲಾರಮ್ಮನಿಗೆ ಹರಕೆ ಹೊತ್ತಿದ್ದ ಅಭಿಮಾನಿಗಳು
ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹರಕೆಯನ್ನು ತೀರಿಸಿದರು. ಈ ಹಿಂದೆ ಸಿದ್ದರಾಮಯ್ಯನವರು ಕೋಲಾರಕ್ಕೆ ಬಂದಾಗಲೇ ಅಭಿಮಾನಿಗಳು ಅವರು ಸಿಎಂ ಆಗಬೇಕೆಂದು ಹರಕೆಯನ್ನು ಕಟ್ಟಿದ್ದರು. ಹೀಗಾಗಿ ಕೋಲಾರದ ಗ್ರಾಮ ದೇವತೆ ಶ್ರೀ ಕೋಲಾರಮ್ಮನ ದೇವಾಲಯದಲ್ಲಿ 108 ತೆಂಗಿನಕಾಯಿ ಒಡೆದು ಹರಕೆಯನ್ನು ತೀರಿಸಿದರು. ಸಿದ್ದರಾಮಯ್ಯನವರು ಸಿಎಂ ಆಗುತ್ತಿರುವುದು ನಮಗೆ ಸಂತೋಷ ತಂದಿದೆ. ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮಂತ್ರಿ ಸ್ಥಾನ ನೀಡಿ ಉಸ್ತುವಾರಿ ವಹಿಸಲು ಒತ್ತಾಯಿಸಿದರು.
ಗದಗಿನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ
ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆ ಆದ ಬೆನ್ನಲ್ಲೇ ಗದಗನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಜೋರಾಗಿತ್ತು. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನುಮಂತಪ್ಪ ದೇವಸ್ಥಾನದ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಂಪ ಸರ್ಕಲ್, ದೂದನಾನಾ ದರ್ಗಾ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕರ್ತರ ಸಂತಸ ಮನೆ ಮಾಡಿತ್ತು.
ಇದನ್ನೂ ಓದಿ: Karnataka CM: ಜಾಲಿ ಮೂಡಲ್ಲಿ ಭಾವಿ ಸಿಎಂ: ಬೈಟ್ ಕೇಳಿದ್ದಕ್ಕೆ ಶಿಳ್ಳೆ ಹೊಡೆದ ಸಿದ್ದರಾಮಯ್ಯ
ಕಟೌಟ್ ಹಾಕಿ ಸಂಭ್ರಮಾಚರಣೆ
ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಸಂಭ್ರಮಾಚರಣೆ ಮನೆ ಮಾಡಿತ್ತು. ನಗರದ ಒನಕೆ ಓಬವ್ವ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿದರೆ, ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಸಿಹಿ ಹಂಚಿದರು. 10 ಅಡಿಯ ಸಿದ್ದರಾಮಯ್ಯರ ಕಟೌಟ್ ನಿಲ್ಲಿಸಿ, ಆಟೋ ಚಾಲಕರಿಗೆ ಸಿಹಿ ಹಂಚಿಕೆ ಮಾಡಿದರು. ಇತ್ತ ಮಂಡ್ಯದ ಮಳವಳ್ಳಿ ತಾಲೂಕಿನ ಚನ್ನಪಿಳ್ಳೆ ಕೊಪ್ಪಲು ಗ್ರಾಮಸ್ಥರು, ಸಿದ್ದರಾಮಯ್ಯನವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿದರು. ಸಿಹಿ ಹಂಚಿ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ