ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಅವರು ನಾಳೆ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮಕ್ಕೆ ಭರ್ಜರಿ ಮ್ಯಾಪಿಂಗ್ ನಡೆದಿದೆ.
ರಾಮನಗರ, ಮೈಸೂರು, ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಗುಪ್ತಚರ ಇಲಾಖೆಯಿಂದ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.
ಕಂಠೀರವ ಸ್ಟೇಡಿಯಂನ ಸುತ್ತಲೂ ಹೆಚ್ಚಿನ ಭದ್ರತೆಗೆ ಖಾಕಿ ಪ್ಲಾನ್ ಮಾಡಿದೆ. ಪ್ರಮುಖವಾಗಿ ಕಂಠೀರವ ಸ್ಟೇಡಿಯಂನ ಎರಡು ಗೇಟ್‌ಗಳಲ್ಲಿ ವಿವಿಐಪಿಗಳಿಗೆ ಮಾತ್ರ ಎಂಟ್ರಿಗೆ ಅವಕಾಶ ಕೊಡಲಾಗುತ್ತಿದೆ. ವಿವಿಐಪಿಗಳಿಗೆ ಪ್ರತ್ಯೇಕವಾಗಿ ಒಳಗೆ ಹೋಗಲು ವ್ಯವಸ್ಥೆ ಮಾಡಲಿದ್ದಾರೆ. ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಜಂಟಿ ಇಬ್ಬರು ಪೊಲೀಸ್ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ 1500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಂಟು ಗೇಟ್‌ಗಳಲ್ಲಿ ಒಬ್ಬ ಎಸಿಪಿ ಮಟ್ಟದ ಅಧಿಕಾರಿಯಿಂದ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಯಿದ್ದು, 500 ಮಂದಿ ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ರೋಡ್ ಡೈವರ್ಷನ್ ನೋಡಿಕೊಳ್ಳಲಿದ್ದಾರೆ.
ಹಲಸೂರು, ಎಂಜಿ ರೋಡ್, ರಿಚ್‌ಮಂಡ್‌ನಿಂದ ಕಾರ್ಪೊರೇಷನ್ ಮೂಲಕ ಬರುವ ವಾಹನಗಳನ್ನು ಹಲಸೂರು ಲೇಕ್ ಮೂಲಕ, ಶಿವಾಜಿನಗರ, ವಿಧಾನಸೌಧ, ಮೆಜೆಸ್ಟಿಕ್, ಮಾರ್ಕೆಟ್ ಮೂಲಕ ಬರುವ ವಾಹನಗಳನ್ನು ರಿಚ್ಮಂಡ್ ರೋಡ್‌ನಿಂದ ಲಾಲ್‌ಬಾಗ್ ರೋಡ್ ಮೂಲಕ, ಮೆಜೆಸ್ಟಿಕ್ ಮಾರ್ಗದಿಂದ ಕಾರ್ಪೊರೇಷನ್‌ಗೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರೋಡ್, ಇನ್‌ಫೆಂಟ್ರಿ ರೋಡ್ ಮೂಲಕ ಸಂಚಾರ ನಿರ್ವಹಿಸಲಾಗುತ್ತಿದೆ. ಕೇಂದ್ರ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹಿನ್ನೆಲೆಯಲ್ಲಿ ಮೈಸೂರ್ ಬ್ಯಾಂಕ್ ಸರ್ಕಲ್, ರಿಚ್ಮಂಡ್ ರೋಡ್, ಟೌನ್ ಹಾಲ್ ರಸ್ತೆಗಳನ್ನು ಪೊಲೀಸರು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: Karnataka CM: ಇಂದು ಮತ್ತೆ ಸಿದ್ದು- ಡಿಕೆಶಿ ದಿಲ್ಲಿಗೆ; ಸಂಪುಟ ರಚನೆ ಚರ್ಚೆ, ಮೂರು ಪಟ್ಟಿ! ಯಾರೆಲ್ಲಾ ಇರ್ತಾರೆ?