ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಮುಗಿದ ಸಚಿವ ಸಂಪುಟ ಸಭೆ
ರಾಜ್ಯದ ಮೊದಲ ಸಚಿವ ಸಂಪುಟ ಸಭೆಯು ಮುಕ್ತಾಯಗೊಂಡಿದೆ.
ಸಭೆಯ ನಿರ್ಧಾರಗಳನ್ನು ಇನ್ನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಪ್ರಕಟಿಸಲಿದ್ದಾರೆ.
ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಅಭಿನಂದನೆ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಅವರು ಇವರಿಬ್ಬರನ್ನು ಅಭಿನಂದಿಸಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ @siddaramaiah ಜೀ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಜೀ ಅವರಿಗೆ ಅಭಿನಂದನೆಗಳು. ಫಲಪ್ರದ ಅಧಿಕಾರಾವಧಿಗಾಗಿ ನನ್ನ ಶುಭ ಹಾರೈಕೆಗಳು.
— Narendra Modi (@narendramodi) May 20, 2023
ನೂತನ ಸರ್ಕಾರ ಸಚಿವ ಸಂಪುಟ ಸಭೆ ಶುರು
ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯು ವಿಧಾನಸೌಧದಲ್ಲಿ ಆರಂಭಗೊಂಡಿದೆ.
ಈ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮತಿ ನೀಡುವ ಸಾಧ್ಯತೆಗಳಿವೆ.
ಪಂಚ ಗ್ಯಾರಂಟಿ ಯೋಜನೆ ಕೆಲವೇ ಗಂಟೆಗಳಲ್ಲಿ ಜಾರಿ
ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ಕೊಡುತ್ತೇವೆ. ಗೃಹ ಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪಾಸ್, ಪದವೀಧರರಿಗೆ 3000 ಸಾವಿರ ರೂಪಾಯಿ- ಈ ಐದು ಗ್ಯಾರಂಟಿಗಳನ್ನು ಇನ್ನು ಕೆಲವೇ ಗಂಟೆಗಳಲ್ಲಿ ಸಂಪುಟ ಸಭೆಯಲ್ಲಿ ಜಾರಿ ಮಾಡುತ್ತೇವೆ. ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡ್ತೀವಿ.
– ರಾಹುಲ್ ಗಾಂಧಿ
ನಾವು ದ್ವೇಷದ ಅಂಗಡಿ ಮುಚ್ಚಿ ಪ್ರೀತಿಯ ಅಂಗಡಿ ತೆರೆಯುತ್ತೇವೆ
ಜನರು ಭ್ರಷ್ಟಾಚಾರ ಮತ್ತು ದ್ವೇಷದ ರಾಜಕಾರಣ ಸೋಲಿಸಿದ್ದಾರೆ. ನಾವು ದ್ವೇಷ ಮುಗಿಸಿ ಪ್ರೀತಿ ಶುರು ಮಾಡೋಣ. ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರವನ್ನು ನೋಡಿದ್ದೀರಿ. ಇನ್ನು ಮುಂದೆ ನಿಜವಾದ ಜನಪರ ಆಡಳಿತ ನೋಡುತ್ತೀರಿ.