ಬೆಂಗಳೂರು: ಕರಾವಳಿ ರಕ್ಷಣಾ ಪಡೆಯ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ಕರ್ನಾಟಕ ಕರಾವಳಿ ಪ್ರದೇಶದಲ್ಲಿ (Karnataka Coast) ಭಾರಿ ದುರಂತವೊಂದು ತಪ್ಪಿದಂತಾಗಿದೆ. ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ (National Institute of Oceanography-NIO) ಆರ್.ವಿ. ಸಿಂಧು ಸಾಧನಾ ಎಂಬ ಸಂಶೋಧನಾ ಹಡಗಿನ ಎಂಜಿನ್ ವಿಫಲಗೊಂಡಿದ್ದು, ಕರಾವಳಿ ರಕ್ಷಣಾ ಪಡೆಯು ಹಡಗನ್ನು ರಕ್ಷಿಸಿದೆ. ಇದರಿಂದಾಗಿ, ಭಾರಿ ಪ್ರಮಾಣದ ತೈಲ ಸೋರಿಕೆ, ವೈಜ್ಞಾನಿಕ ದಾಖಲೆ ಹಾಗೂ ವಿಜ್ಞಾನಿಗಳಿಗೆ ಎದುರಾಗುತ್ತಿದ್ದ ಅಪಾಯವನ್ನು ತಪ್ಪಿಸಿದಂತಾಗಿದೆ.
ಕಾರವಾರ ಕರಾವಳಿ ಮೂಲಕ ಆರ್.ವಿ. ಸಿಂಧು ಸಾಧನಾ ಹಡಗು ಗುರುವಾರ (ಜುಲೈ 27) ಗೋವಾಗೆ ತೆರಳುತ್ತಿತ್ತು. ಸಮುದ್ರದಲ್ಲಿ ಸಂಶೋಧನೆ ಹಾಗೂ ದತ್ತಾಂಶ ಸಂಗ್ರಹಕ್ಕಾಗಿ ಹಡಗು ಚಲಿಸುತ್ತಿತ್ತು. ಇದೇ ವೇಳೆ, ಹವಾಮಾನ ವೈಪರೀತ್ಯ ಉಂಟಾಗಿದೆ. ಅಷ್ಟೇ ಅಲ್ಲ, ಹಡಗಿನ ಎಂಜಿನ್ ವಿಫಲವಾಗಿದೆ. ಇದರಿಂದಾಗಿ ಹಡಗು ಮುಳುಗುವ ಹಂತ ತಲುಪಿತ್ತು ಎಂದು ತಿಳಿದುಬಂದಿದೆ.
ಆರ್.ವಿ. ಸಿಂಧು ಸಾಧನಾ ಹಡಗಿನ ಎಂಜಿನ್ ವಿಫಲಗೊಂಡಿರುವ ಕುರಿತು ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗೆ ಮಾಹಿತಿಗೆ ದೊರೆತಿದೆ. ಆಗ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯು ಕೂಡಲೇ ಕಾರ್ಯಪ್ರವೃತ್ತರಾಗಿ ಆರ್.ವಿ. ಸಿಂಧು ಸಾಧನಾ ಹಡಗನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Road Accident: ಸುಣ್ಣ ತುಂಬಿದ್ದ ಲಾರಿ ಬ್ರೇಕ್ ಫೇಲ್; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಆರ್.ವಿ. ಸಿಂಧು ಸಾಧನಾ ಹಡಗಿನಲ್ಲಿ ಅಪಾರ ಪ್ರಮಾಣದ ತೈಲ, ಎಂಟು ಪ್ರಮುಖ ವಿಜ್ಞಾನಿಗಳು ಸೇರಿ 36 ಸಿಬ್ಬಂದಿಯು ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಹಾಗೊಂದು ವೇಳೆ ದುರಂತ ಸಂಭವಿಸಿದ್ದರೆ ಇವರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಹಲವು ವೈಜ್ಞಾನಿಕ ದಾಖಲೆಗಳು ನೀರುಪಾಲಾಗುತ್ತಿದ್ದವು. ಅದರಲ್ಲೂ, ತೈಲ ಸೋರಿಕೆಯಿಂದಾಗಿ ಪರಿಸರದ ಮೇಲೆ ಭಾರಿ ಪರಿಣಾಮ ಬೀರುತ್ತಿತ್ತು ಎಂದು ತಿಳಿದುಬಂದಿದೆ.