ಬೆಂಗಳೂರು: ಪುಲಿಕೇಶಿ ನಗರದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟ ಹಿಡಿದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಹ ಇದ್ದರು.
ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ತಪ್ಪಿಸುವ ಅಂತಿಮ ತೀರ್ಮಾನ ಇನ್ನೂ ಆಗಿರಲಿಲ್ಲ, ಚರ್ಚೆ ನಡೆಯುತ್ತಿತ್ತು. ಆದರೆ ಅಷ್ಟರೊಳಗೆ ತಮ್ಮ ಶಾಸಕ ಸ್ಥಾನಕ್ಕೆ ಶ್ರೀನಿವಾಸಮೂರ್ತಿ ರಾಜೀನಾಮೆ ನೀಡಿದ್ದಾರೆ. ಈದು ಸರಿಯಾದ ಕ್ರಮವಲ್ಲ ಎಂದು ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಸಹ ಇದಕ್ಕೆ ದನಿಗೂಡಿಸಿದ್ದು, ರಾಜೀನಾಮೆ ನೀಡುವ ಮುನ್ನ ತಮಗೂ ಹೇಳಿಲ್ಲ ಎಂದರು. ಈ ಕುರಿತು ಮತ್ತೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ತಿಳಿದುಬಂದಿದೆ.
ಸಭೆಯ ನಂತರ ಮಾತನಡಿದ ಸಿದ್ದರಾಮಯ್ಯ, ಅಖಂಡ ಮತ್ತು ಹರಿಹರ ರಾಮಪ್ಪ ಟಿಕೆಟಿಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾನು ಈಗಾಗಲೇ ಅಭಿಪ್ರಾಯ ಹೇಳಿದ್ದೇನೆ. ನಾನು, ಅಧ್ಯಕ್ಷರು, ಸುರ್ಜೆವಾಲ ಎಲ್ಲರೂ ಅಭಿಪ್ರಾಯ ಹೇಳಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಪಡೆದಿದ್ದಾರೆ. ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತೆ ಎಂದಿದ್ದಾರೆ.
ಚುನಾವಣೆಗೂ ಮೂರು ತಿಂಗಳು ಯಾವುದೇ ಟೆಂಡರ್ ಕರೆಯಬಾರದು. ಟೆಂಡರ್ ಆದ ಮೇಲೆ ವರ್ಕ್ ಕೊಡಬಾರದು. ಕೆಲಸ ಶುರುವಾಗಿದ್ದಕ್ಕೆ ಮಾತ್ರ ಅವಕಾಶ ಇದೆ. ಚುನಾವಣೆಗೆ ಹಣ ತೆಗೆದುಕೊಂಡು ಟೆಂಡರ್ ಕೊಡ್ತಾ ಇದ್ದಾರೆ. ಈ ಬಗ್ಗೆ ಕ್ರಮಕ್ಕೆ ಚುನಾವಣಾ ಆಯೋಗ ಮೇಲೆ ಒತ್ತಡ ಹಾಕಿದ್ದೇವೆ.
ಸಾವಿರಾರು ಕೋಟಿ ರೂ. ಟೆಂಡರ್ ಕರೆದಿದ್ದಾರೆ. 40% ಅಲ್ಲ 50% ಕಮಿಷನ್ ತೆಗೆದುಕೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.