ಬೆಂಗಳೂರು: ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ರತ್ನ ಮಾಮನಿ ಅವರ ನಾಮಪತ್ರವನ್ನು ತಾಂತ್ರಿಕ ಕಾರಣಕ್ಕಾಗಿ ತಿರಸ್ಕರಿಸದೆ ಇರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಚುನಾವಣಾ ಆಯೋಗವು ಯಾವುದೇ ಅಭ್ಯರ್ಥಿ ತಮ್ಮ ನಾಮ ಪತ್ರಗಳನ್ನು ಸಲ್ಲಿಸಲು ಏಪ್ರಿಲ್ 20ರ ಮದ್ಯಾಹ್ನ 3 ಗಂಟೆವರೆಗೆ ಅವಕಾಶ ನೀಡಿತ್ತು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಏಪ್ರಿಲ್ 18ರಂದು ತಮ್ಮ ನಾಮ ಪತ್ರ ಸಲ್ಲಿಸಿದ್ದಾರೆ. ಇವರ ಚುನಾವಣಾ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗ ಏಪ್ರಿಲ್ 19ರಂದು ಅಪ್‌ಲೋಡ್ ಮಾಡಿದೆ.
ಆದರೆ ಬಿಜೆಪಿ ಅಭ್ಯರ್ಥಿಯ ಅಫಿಡವಿಟ್‌ಗೆ ಛಾಪಾ ಕಾಗದವನ್ನು ಏಪ್ರಿಲ್ 20ರ ಸಂಜೆ 07.38ರಲ್ಲಿ ವಿಕಾಸ್ ಸಹಕಾರಿ ಸಂಸ್ಥೆಯಿಂದ ಖರೀದಿ ಮಾಡಿರುವುದು ತೋರಿಸುತ್ತಿದೆ. ನೋಟರಿ ಮುಂದೆ ಪ್ರಮಾಣೀಕರಿಸಿ ನಂತರ ಚುನಾವಣಾ ಆಯೋಗಕ್ಕೆ ದಾಖಲು ಮಾಡಿದ್ದಾರೆ.
ಯಾವುದೇ ಸಹಕಾರಿ ಸಂಘದ ವಹಿವಾಟು ಸಂಜೆ 5 ಗಂಟೆಗೆ ಮುಕ್ತಾಯ ಆಗುತ್ತದೆ. ಇವರ ಪ್ರಮಾಣ ಪತ್ರದ ಸ್ಟಾಂಪ್ ಪೇಪರ್ ಖರೀದಿ ಹಲವಾರು ಅನುಮಾನಗಳಿಗೆ ಅವಕಾಶ ನೀಡುತ್ತಿದೆ. ಅದೇ ದಿನ ಇವರು ನಿಗದಿತ ಸಮಯದ ನಂತರ ಪ್ರಮಾಣ ಪತ್ರ ಚುನಾವಣಾ ಆಯೋಗಕ್ಕೆ ನೀಡಿದ್ದರೆ, ಅದು ಮರುದಿನ ಅಂದರೆ ಏಪ್ರಿಲ್ 21ರಂದು ಚುನಾವಣಾ ಆಯೋಗದಲ್ಲಿ ದಾಖಲಾಗಬೇಕು ಮತ್ತು ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಆಗಬೇಕು. ಆದರೆ ಆಯೋಗವು ಈ ಪ್ರಮಾಣ ಪತ್ರ ಏಪ್ರಿಲ್ 19ರಂದು ಅಪ್‌ಲೋಡ್ ಆಗಿದೆ ಎಂದು ತಿಳಿಸುತ್ತಿದೆ.
ಅಂದರೆ ಏಪ್ರಿಲ್ 20ರ ಪ್ರಮಾಣ ಪತ್ರ ಏಪ್ರಿಲ್ 19ರಂದು ಅಪ್‌ಲೋಡ್ ಆಗಲು ಹೇಗೆ ಸಾಧ್ಯ? ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ರಾಜ್ಯದಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಯಾವುದು?
ಚುನಾವಣಾ ಆಯೋಗವು ಒಂದು ರಾಜಕೀಯ ಪಕ್ಷದ ಪರವಾಗಿ ವಾಲಿದರೆ ಕರ್ನಾಟಕದಲ್ಲಿ ಮುಕ್ತವಾದ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಒತ್ತಡಕ್ಕೆ ಮಣಿದು ಇಂತಹ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ತನ್ನ ಪಕ್ಷಪಾತದ ನಿಲುವನ್ನು ಒಪ್ಪಿಕೊಳ್ಳಲಿ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗದ ಇಂತಹ ರಾಜಕೀಯ ಪ್ರೇರಿತ ಕ್ರಮಗಳನ್ನು ಖಂಡಿಸುತ್ತದೆ ಮತ್ತು ರಾಜ್ಯದಲ್ಲಿ ಮುಕ್ತವಾದ ಚುನಾವಣೆಗೆ ಒತ್ತಾಯಿಸುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.