Site icon Vistara News

Drought Relief: ಕಡಿಮೆ ಬರ ಪರಿಹಾರ; ಕೇಂದ್ರದ ವಿರುದ್ಧ ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ!

Drought Relief

Karnataka Congress Alleges Less Drought Relief; Protest Against Centre In Bengaluru Tomorrow

ಬೆಂಗಳೂರು: ಕರ್ನಾಟಕ ಸರ್ಕಾರವು ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋದ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ (Karnataka) 3,454 ಕೋಟಿ ರೂ. ಬರ ಪರಿಹಾರ (Drought Relief) ನೀಡಿದೆ. ಇದರ ಬೆನ್ನಲ್ಲೇ, ಕಡಿಮೆ ಪರಿಹಾರ ನೀಡಲಾಗಿದೆ ಎಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರವು ಮತ್ತೊಂದು ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹೌದು, ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ಭಾನುವಾರ (ಏಪ್ರಿಲ್‌ 28) ಬೆಳಗ್ಗೆ 9.30ಕ್ಕೆ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಲೋಕಸಭೆ ಚುನಾವಣೆ, ಭಾನುವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕೈಗೊಳ್ಳುತ್ತಿದ್ದು, ಇದರ ಮಧ್ಯೆಯೇ ಪ್ರತಿಭಟನೆ ನಡೆಸುವ ಮೂಲಕ ತಂತ್ರ ಹೆಣೆಯಲು ಕಾಂಗ್ರೆಸ್‌ ಮುಂದಾಗಿದೆ. “ರಾಜ್ಯ ಸರ್ಕಾರವು 18,172 ಕೋಟಿ ರೂ. ಬರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ. ಇಷ್ಟೂ ಹಣ ಬಿಡುಗಡೆ ಮಾಡಬೇಕು ಎಂಬುದಾಗಿ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಕೇಳಿದಷ್ಟು ಬರ ಪರಿಹಾರ ನೀಡಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹಾಗಾಗಿ, ಪೂರ್ಣ ಪ್ರಮಾಣದ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆಹೋದ ಬಳಿಕವೇ ಕೇಂದ್ರವು ರಾಜ್ಯಕ್ಕೆ ಬರ ಪರಿಹಾರ ನೀಡಿದೆ. ಇದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರಕ್ಕೆ ಸಿಕ್ಕ ಮುನ್ನಡೆಯಾಗಿದೆ. ಹಾಗಾಗಿ, ಇದನ್ನೇ ಚುನಾವಣೆ ದಾಳವಾಗಿಸುವುದು ಕೂಡ ಕಾಂಗ್ರೆಸ್‌ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಮಲತಾಯಿ ಧೋರಣೆ ಎಂದ ಕೃಷ್ಣ ಭೈರೇಗೌಡ

ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಕೇವಲ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಈ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಧನ್ಯವಾದ ಎಂದ ಕರ್ನಾಟಕ ಬಿಜೆಪಿ

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಬಿಜೆಪಿ, “ಬರ ಪರಿಹಾರ ಮಾಡಿದ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದಿದೆ.

ಇದನ್ನೂ ಓದಿ: Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Exit mobile version