Site icon Vistara News

Karnataka Congress: ಬಿಜೆಪಿ ನಾಯಕರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದನ್ನು ಸಮರ್ಥಿಸಿಕೊಂಡ ಡಿ.ಕೆ. ಶಿವಕುಮಾರ್‌

karnataka congress chief DK Shivakumar defends move to invite other party leaders to congress

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾದಂತೆ ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವುದು ಹೆಚ್ಚುತ್ತಿದ್ದು, ಈ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮರ್ಥನೆ ಮಾಡಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್‌ನ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು. ನಾನು ಬಿಜೆಪಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡುತ್ತಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಳೆದ ಚುನಾವಣೆ ನಂತರ ಬಿಜೆಪಿಯವರು ಕಾಂಗ್ರೆಸ್ ಪಕ್ಷದ 13 ಶಾಸಕರು ಜೆಡಿಎಸ್‌ನ 5 ಶಾಸಕರು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ 18 ಶಾಸಕರ ಮನೆ ಬಾಗಿಲು ತಟ್ಟಿ ಅವರನ್ನು ಕರೆದುಕೊಂಡು ಹೋದರಲ್ಲಾ ಆಗ ಮುಖ್ಯಮಂತ್ರಿಗಳ ನೈತಿಕತೆ ಎಲ್ಲಿಗೆ ಹೋಗಿತ್ತು? ಏನಾಗಿತ್ತು?

ಆಪರೇಷನ್ ಕಮಲ ಮಾಡಿ ಬೇರೆ ಪಕ್ಷದಲ್ಲಿ ಆಯ್ಕೆಯಾಗಿದ್ದ ಶಾಸಕರನ್ನು ಕರೆದುಕೊಂಡು ಹೋಗಿ ನಾಲ್ಕು ವರ್ಷಗಳಿಂದ ಅಧಿಕಾರ ಅನುಭವಿಸಿದ್ದೀರಲ್ಲಾ ಈಗ ಮಾತನಾಡಲು ಸಿಎಂಗೆ ಯಾವ ನೈತಿಕತೆ ಇದೆ? ನಿಮ್ಮ ಪಕ್ಷಕ್ಕೆ ಬಹುಮತ ಬಾರದೇ ಇದ್ದಾಗ ನೀವು ಅನೈತಿಕವಾಗಿ ದಳ, ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೀರಿ. ಇದು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಮೇ 10ರ ದಿನ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯವನ್ನಾಗಿ ನಿರ್ಮಾಣ ಮಾಡುವ, ಭ್ರಷ್ಟಾಚಾರ ಬಡಿದೋಡಿಸುವಂತಹ ದಿನ. ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡುವ ದಿನ. ಈ ರಾಜ್ಯದ ಹಾಗೂ ಜನರ ಭವಿಷ್ಯವನ್ನು ಜನರೇ ತೀರ್ಮಾನಿಸುವ ದಿನ. ಈ ಪ್ರಜಾಪ್ರಭುತ್ವದ ಹಬ್ಬಕ್ಕೆ ಎಲ್ಲರೂ ಕಾತರರಾಗಿದ್ದರು.

ಗುಬ್ಬಿಯ ಮಾಜಿ ಶಾಸಕ ವಾಸು ಅವರು, ಗೃಹ ಮಂಡಳಿಯ ಮಾಜಿ ಅಧ್ಯಕ್ಷರು, ಮೂಡಿಗೆರೆ ಪುರಸಭೆ ಮಾಜಿ ಅಧ್ಯಕ್ಷರಾದ ಹಾಲಪ್ಪ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಮಂಡ್ಯದ ಸತ್ಯಾನಂದ ಅವರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಗುಬ್ಬಿ ಹಾಗೂ ತುಮಕೂರು ಜಿಲ್ಲೆಯಿಂದ ಅನೇಕರು ಪಕ್ಷಕ್ಕೆ ಸೇರುತ್ತಿದ್ದು ಎಲ್ಲರಿಗೂ ಹೃದಯಪೂರ್ವಕ ಸ್ವಾಗತ.

ಸತತ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಪ್ರಮುಖ ನಾಯಕರು ವಾಸು ಅವರು. ನಾನು ಅನೇಕ ವರ್ಷಗಳಿಂದ ಅವರಿಗೆ ಗಾಳ ಹಾಕುತ್ತಿದ್ದೆ. ಅದಕ್ಕೆ ಬಿದ್ದಿರಲಿಲ್ಲ. ಆದರೆ ಈಗ ರಾಜ್ಯದ ಮತದಾರರ ಚಿತ್ತ ಯಾವ ಕಡೆ ಇದೆ ಎಂದು ತಿಳಿದು ಮತದಾರರ ಗಾಳಕ್ಕೆ ಅವರು ಬಿದ್ದಿದ್ದಾರೆ. ಮತದಾರರಿಗೆ ಬದಲಾವಣೆ, ರಾಷ್ಟ್ರೀಯ ಪಕ್ಷ ಬೇಕಾಗಿದೆ. ಅವರ ಆಗಮನ ತುಮಕೂರು ಜಿಲ್ಲೆ ಮಾತ್ರವಲ್ಲ ಹಳೇ ಮೈಸೂರು ಭಾಗಕ್ಕೆ ಶಕ್ತಿ ತುಂಬಲಿದೆ. ಮುಂದಿನ ಕೆಲ ದಿನಗಳಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕಾಂತರಾಜು ಅವರು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದರೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕೋಲಾರದಿಂದ ಹಾಲಿ ಪರಿಷತ್ ಸದಸ್ಯರಾಗಿದ್ದ ಮನೋಹರ್, ಶಾಸಕ ಶ್ರೀನಿವಾಸ ಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದ ಜತೆ ಸೇರಿದ್ದಾರೆ. ಮಧುಬಂಗಾರಪ್ಪ, ದೇವೇಂದ್ರಪ್ಪ ಸೇರಿದಂತೆ 37 ಮಂದಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ.

ಇದನ್ನೂ ಓದಿ: Criminal Politics | ರೌಡಿಗಳ ಪಕ್ಷ ಸೇರ್ಪಡೆ; ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ ಎನ್‌. ರವಿಕುಮಾರ್‌ 16 ಪ್ರಶ್ನೆ

ಬಿಜೆಪಿಯಿಂದ ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕು ವರ್ಷ ಅಧಿಕಾರ ಹೊಂದಿದ್ದ ಪುಟ್ಟಣ್ಣ, ಚಿಂಚನಸೂರು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಯಡಿಯೂರಪ್ಪ ಅವರ ಆತ್ಮೀಯರು ನಿಂಬಿಕಾಯಿ, ಯು.ಬಿ ಬಣಕಾರ್, ಬೊಮ್ಮಾಯಿ ಅವರ ಆಪ್ತರಾಗಿದ್ದ ಮಂಜುನಾಥ್ ಕುನ್ನೂರು ಸೇರಿದಂತೆ ಅನೇಕರು ಪಕ್ಷ ಸೇರಿದ್ದು, ಮುಂದೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಬಹಿರಂಗಪಡಿಸುತ್ತೇನೆ.

ಮಾಜಿ ಮಂತ್ರಿ ವಾಸು ಅವರ ಆಗಮನ ಇಡೀ ರಾಜ್ಯಕ್ಕೆ ಶಕ್ತಿ ತುಂಬಿದ್ದಾರೆ. ಅವರು ಬಹಳ ಹಿಂದೆಯೇ ಈ ತೀರ್ಮಾನ ಮಾಡಿದ್ದು, ನಾನು, ಸಿದ್ದರಾಮಯ್ಯ ಹಾಗೂ ಆ ಜಿಲ್ಲೆಯ ನಾಯಕರೆಲ್ಲರೂ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ತ್ರಿವರ್ಣ ಧ್ವಜ ನೀಡಿ ಯಾತ್ರೆಗೆ ಶಕ್ತಿ ತುಂಬಿದ್ದನ್ನು ನಾವು ಸ್ಮರಿಸಬೇಕಿದೆ.

ಇನ್ನು ಮೂಡಿಗೆರೆ ಕ್ಷೇತ್ರದ ಬಿಜೆಪಿ ನಾಯಕರು ಎಸ್.ಎಂ ಕೃಷ್ಣ ಅವರ ಆಪ್ತರಾದ ಹಾಲಪ್ಪ ಅವರು ಹಾಗೂ ಸತ್ಯಾನಂದ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇವರ ನೇತೃತ್ವದಲ್ಲಿ ನೂರಾರು ಮಂದಿ ಪಕ್ಷ ಸೇರುತ್ತಿದ್ದು, ಅವರನ್ನೂ ನಾವು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಜೆಡಿಎಸ್ ನಿಂದ ಬಾಬು ಹಾಗೂ ಅವರ ಆಪ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

Exit mobile version