Site icon Vistara News

Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್‌ ಸೇರುವುದನ್ನು ತಡೆಯಲಾಗದು: ಡಿಕೆಶಿ

karnataka congress chief DK Shivakumar says nobody can stop veerashaiva linagayts joining congress

#image_title

ಬೆಂಗಳೂರು: ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಅಣೆಕಟ್ಟೆ ಒಡೆದು ಹೋಗಿದ್ದು, ಆ ನೀರು ಕಾಂಗ್ರೆಸ್‌ಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಪಕ್ಷದ ಮುಖಂಡರನ್ನು ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತನಾಡಿದರು.

ಯಡಿಯೂರಪ್ಪ ಅವರ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ನಡೆದಿದೆ ಹಾಗೂ ಲಿಂಗಾಯತ ಸಿಎಂ ವಿಚಾರವಾಗಿ ಚರ್ಚೆಯಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಶಿವಕುಮಾರ್‌ ಉತ್ತರಿಸಿ, ‘ಅಣೆಕಟ್ಟು ಒಡೆದ ನಂತರ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದನ್ನು ಹೊಸದಾಗಿ ಕಟ್ಟಬೇಕು. ಈ ನೀರು ಸಮುದ್ರ ಸೇರಬೇಕು. ಈ ಕಾಂಗ್ರೆಸ್ ಸಮುದ್ರಕ್ಕೆ ಎಲ್ಲರೂ ಬಂದು ಸೇರಬೇಕು’ ಎಂದರು.

ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಸಾವಿರಾರು ಜನ ಕಾರ್ಯಕರ್ತರು ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಪಕ್ಷ ಸೇರ್ಪಡೆಗೆ ಅನುಮತಿ ನೀಡಿದ್ದೇವೆ. ನಾಮಪತ್ರ ಸಲ್ಲಿಕೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಮೇ 10ರಂದು ಕೇವಲ ಮತದಾನ ದಿನವಲ್ಲ. ಭ್ರಷ್ಟಾಚಾರ ಬಡಿದೋಡಿಸುವ ದಿನ, ನಾಲ್ಕು ವರ್ಷಗಳಿಂದ ಈ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಬದಲಾವಣೆಗೆ ನಾಂದಿ ಹಾಡುವ ದಿನ, ಸಂವಿಧಾನ ಪ್ರಜಾಪ್ರಭುತ್ವ ಉಳಿಸಲು ದಕ್ಷಿಣ ಭಾರತದಿಂದ ಆರಂಭವಾಗುವ ದಿನ. ಇನ್ನು ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮುಂದುವರಿದರೆ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ತುಮಕೂರಿನಲ್ಲಿ 20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಜಿ ಶಾಸಕ ಗಂಗಹನುಮಯ್ಯ ಹಾಗೂ ಕಮಲಾ ಗಂಗಹನುಮಯ್ಯ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿ, ಪರಮೇಶ್ವರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ಜತೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತಿಮ್ಮಜ್ಜ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಮಾರುತಿ ಅವರು, ರಾಮಕೃಷ್ಣ, ತಿಮ್ಮಯ್ಯ, ಶಿವಕುಮಾರ್, ಸಿದ್ದಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪಕ್ಷ ಸೇರುತ್ತಿದ್ದಾರೆ. ಮಾಜಿ ಮೇಯರ್ ಆಗಿದ್ದ ಶಾಂತಕುಮಾರಿ ಅವರು ಪಕ್ಷ ಸೇರಲು ಮುಂದಾಗಿದ್ದಾರೆ. ಬಿ.ಆರ್. ನಂಜುಂಡಪ್ಪ ಅವರು ಹಿರಿಯ ನಾಯಕರು, ಅವರು ಹಿಂದೆಯೇ ಶಾಸಕರಾಗಬೇಕಿತ್ತು. ಅವರು ತಮ್ಮ ಅಭಿಮಾನಿ ಬಳಗದ ಜತೆ ಕಾಂಗ್ರೆಸ್ ಜತೆ ಸೇರಿದ್ದಾರೆ. ನಾರಾಯಣ ಸ್ವಾಮಿ ಅವರು ಸೇರಿದಂತೆ 9 ಮಾಜಿ ಕಾರ್ಪೊರೇಟರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರೆ ಎಂದರು.

ಕಾಂಗ್ರೆಸ್ ಸೇರಲು ಅನೇಕರು ಮುಂದಾಗಿದ್ದು, ಎಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಳಕು ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಅದನ್ನು ಗೌರವಯುತವಾಗಿ ಸ್ವಾಗತಿಸಿ. ಈ ಪಕ್ಷಕ್ಕೆ ಆಗಮನ ನಿಮಗೆ ಶಕ್ತಿ ತುಂಬುತ್ತದೆ. ರಾಜ್ಯಕ್ಕೆ ಬದಲಾವಣೆ ತರಲಿದೆ. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಘೋಷಣೆ ಮಾಡಲಿ ಎಂದು ವಿ. ಸೋಮಣ್ಣ ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿ, ‘ನನಗೆ ಸೋಮಣ್ಣ, ಬೊಮ್ಮಾಯಿ ಅವರ ಹಿತವಚನ ಬೇಡ. ಬಸವಣ್ಣನವರ ತತ್ವವೇ ಕಾಂಗ್ರೆಸ್ ತತ್ವ. ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಮಾಡುತ್ತಿದ್ದೇವೆ. ಮೊದಲು ಬಿಜೆಪಿಯವರು ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎಂದರು. ಈಗ ಮೋದಿ ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅವರು ಸಿಕ್ಕ ಕಡೆಗಳಲ್ಲಿ ಹಸ್ತಲಾಘವ ಮಾಡಿ ಅವರಿಗೆ ಬೀಳ್ಕೊಡುಗೆ ನೀಡಿ’ ಎಂದರು.

ತಮ್ಮ ನಾಮಪತ್ರ ತಿರಸ್ಕಾರವಾಗುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿ, ಕಳೆದ ಬಾರಿಯೇ ನನ್ನ ಅರ್ಜಿ ತರಸ್ಕರಿಸಲು ಮುಂದಾಗಿದ್ದರು. ಆದರೆ ನಾನು ಐಟಿ ಅಧಿಕಾರಿಗಳ ಮುಂದೆ ಹೋಗಿ ಎಲ್ಲ ಮಾಹಿತಿ ನೀಡಿದೆ. ಅವರು ನನಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿವೆ. ಕಳೆದ 15 ವರ್ಷಗಳಲ್ಲಿ ನಾನು ಒಂದು ಮನೆ ಬಿಟ್ಟರೆ ಉಳಿದಂತೆ ಯಾವುದೇ ಆಸ್ತಿ ಖರೀದಿ ಮಾಡಿಲ್ಲ ಎಂದರು.

ನನಗೆ ಬೇಕಾದಷ್ಟು ಅಧಿಕಾರಿಗಳು, ಮಾಧ್ಯಮ ಸ್ನೇಹಿತರು ಇದ್ದು, ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ನನ್ನ ಮೇಕೆದಾಟು, ಭಾರತ ಜೋಡೋ ಯಾತ್ರೆ, ಸ್ವಾತಂತ್ರ್ಯ ನಡಿಗೆ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಭ್ರಷ್ಟಾಚಾರ, ಕೋವಿಡ್ ಭ್ರಷ್ಟಾಚಾರ ಬಗ್ಗೆ ನನ್ನ ಅವಧಿಯಲ್ಲಿ ದೊಡ್ಡ ಹೋರಾಟ ನಡೆದು ಮಂತ್ರಿ ರಾಜೀನಾಮೆ ನೀಡಬೇಕಾಯಿತು. ಈತನಿಂದ ಈ ಪರಿಸ್ಥಿತಿ ಬಂದಿದೆ ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಏನೇ ಕುತಂತ್ರ ಪ್ರಯೋಗ ಮಾಡಿದರೂ ನಾನು ನ್ಯಾಯಾಲಯ ಹಾಗೂ ಜನರ ತೀರ್ಪು ನಂಬಿದ್ದೇನೆ.

ಯಡಿಯೂರಪ್ಪ ಅವರ ಸರ್ಕಾರ ಬೇರೆಯವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ನೀಡದೇ, ಕೇವಲ ನನ್ನ ಪ್ರಕರಣ ಮಾತ್ರ ನೀಡಿದ್ದಾರೆ. ಅಡ್ವಕೇಟ್ ಜೆನರಲ್ ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಹೇಳಿದ್ದರೂ ದೆಹಲಿಯವರ ಒತ್ತಡದಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ರಾಜಕೀಯದಿಂದಲೇ ನನ್ನನ್ನು ತೆಗೆದುಹಾಕಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದರು.

ರಾಹುಲ್‌ ಗಾಂಧಿಯವರನ್ನೇ ಬಿಡಲಿಲ್ಲ…

7 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ ರಾಹುಲ್ ಗಾಂಧಿ ಅವರನ್ನು ಒಂದು ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿ ಕೇವಲ 22 ದಿನಗಳಲ್ಲಿ ವಿಚಾರಣೆ ಮಾಡಿ ಅವರಿಗೆ ಇದುವರೆಗೂ ಯಾರಿಗೂ ನೀಡದ ಶಿಕ್ಷೆ ಪ್ರಕಟಿಸಿ, 24 ಗಂಟೆಗಳಲ್ಲಿ ಅವರ ಸಂಸತ್ ಸದಸ್ಯತ್ವ ರದ್ದು ಮಾಡಿ, ಅವರ ಮನೆ ಖಾಲಿ ಮಾಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ್ದು, ಅವರಿಂದ ಮನೆ ಕಿತ್ತುಕೊಂಡಿದ್ದಕ್ಕೆ ಅವರು ಬೇಸರವಾಗುವುದಿಲ್ಲ.

ಅವರಿಗೆ ಸಣ್ಣ ಕೊಠಡಿ ಇದ್ದರೂ ಸಾಕು. ಭಾರತ ಜೋಡೋ ಯಾತ್ರೆ ಸಮಯದಲ್ಲಿ ಅವರು ಕೇವಲ ವ್ಯಾನ್ ನಲ್ಲಿ ಮಲಗಿ 6 ತಿಂಗಳ ಕಾಲ ಪಾದಯಾತ್ರೆ ಮಾಡಿದ್ದಾರೆ. ಸರಳತೆಯಲ್ಲಿ ಬದುಕುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಯಾವುದೇ ಅಕ್ರಮ ಮಾಡದಿದ್ದರೂ ಯಂಗ್ ಇಂಡಿಯಾ ಸೇರಿದಂತೆ ಅನೇಕ ಪ್ರಕರಣ ದಾಖಲಿಸಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅವರನ್ನೇ ಬಿಟ್ಟಿಲ್ಲ ನನ್ನನ್ನು ಬಿಡುತ್ತಾರಾ? ಎಂದು ಪ್ರಶನಿಸಿದರು.

ಇದನ್ನೂ ಓದಿ: Karnataka Election 2023 : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಕನಕಪುರದಲ್ಲಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

Exit mobile version