ಬೆಂಗಳೂರು: ಚುನಾವಣೆ ಸಮಯದಲ್ಲಿ (Karnataka Congress) ಮತದಾರರಿಗೆ ಹಂಚಲು ತಂದ ವಸ್ತುಗಳನ್ನು ವಶಕ್ಕೆ ಪಡೆದಿದ್ದರೂ ನಿಜವಾದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಚುನಾವಣಾ ಆಯೋಗ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಹೇಳಿದ್ದಾರೆ.
ಚುನಾವಣಾ ಆಯೋಗದ ವಿರುದ್ಧವೇ ದೂರು ನೀಡಿದ ಕೃಷ್ಣ ಭೈರೇಗೌಡ, ಚುನಾವಣಾ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಮತದಾರರಿಗೆ ಆಮಿಷವೊಡ್ಡಲು ಬಿಜೆಪಿ ಅಭ್ಯರ್ಥಿ ಕೋಟ್ಯಂತರ ಮೌಲ್ಯದ ಸಾಮಾಗ್ರಿಗಳನ್ನ ಸಂಗ್ರಹಿಸಿದ್ದರು. ಆದರೂ ಸಂಬಂಧಪಟ್ಟ ಅಭ್ಯರ್ಥಿ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಯಾರೋ ಬೇನಾಮಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ, ಆ ಮೂಲಕ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಮಾಜಿ ಬಿಬಿಎಂಪಿ ಸದಸ್ಯ ಮುನೀಂದ್ರ ಕುಮಾರ್ ಅವರು ಹಂಚಲು ಶೇಖರಿಸಿದ್ದರು ಎನ್ನಲಾದ ವಸ್ತುಗಳನ್ನು ಇತ್ತೀಚೆಗೆ ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ಆದರೆ ಈ ಪ್ರಕರಣದಲ್ಲಿ ಅನಾಮಿಕರನ್ನು ಆರೋಪಿಯನ್ನಾಗಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಕೃಷ್ಣ ಭೈರೇಗೌಡ, ಚುನಾವಣಾಧಿಕಾರಿಗಳು ಕಾನೂನು ವಿರುದ್ಧವಾಗಿ ಕೆಲಸ ಮಾಡ್ತಾ ಇದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹ ಮಾಡಿದ್ದೇವೆ. ಸಾಕ್ಷಿ ಸಮೇತವಾಗಿ ದೂರ ಕೊಡಲಾಗಿದೆ. ನನ್ನ ಕ್ಷೇತ್ರದಲ್ಲಿ 3.6 ಕೋಟಿ ವೆಚ್ಚದ ಸಾಮಾಗ್ರಿಗಳನ್ನು ಸೀಜ್ ಮಾಡಿದ್ದಾರೆ. ಜನರಿಗೆ ಕೊಡಲು ಸಿದ್ದವಾಗಿರುಗ ಸಾಮಾಗ್ರಿಗಳು ಅವು. ಆ ಸಾಮಾಗ್ರಿಗಳ ಮೇಲೆ ಬಿಜೆಪಿ ಆಕಾಂಕ್ಷಿ ಹೆಸರು, ಪೋಟೋ ಇದೆ. ಆದರೂ ಅವರ ಮೇಲೆ ಕ್ರಮ ಆಗಿಲ್ಲ. ಯಾರೋ ಒಬ್ಬ ಬೇನಾಮಿ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈಶ್ವರ ಖಂಡ್ರೆ, ರೂಪಶಶಿಧರ ಮೇಲೆ ಎಫ್.ಐ.ಆರ್ ಮಾಡ್ತಾರೆ. ಕಾಂಗ್ರೆಸ್ ನವರ ಮೇಲೆ ಎಫ್.ಐ.ಆರ್ ಮಾಡ್ತಾರೆ. ಆದರೆ ಬಿಜೆಪಿಯ ಅಭ್ಯರ್ಥಿ ಮೇಲೆ ಎಫ್ ಐ ಆರ್ ಆಗಲ್ಲ. ಅವರ ಹೆಸರು ಸಹ ಪ್ರಕರಣದಲ್ಲಿ ಬರುವುದಿಲ್ಲ. ಅಧಿಕಾರಿಗಳು ಬಿಜೆಪಿಯವರು ಮಾಡುತ್ತಿರುವ ಅಕ್ರಮಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ಅವರ ಎಜೆಂಟ್ ಗಳಾಗಿ ಕೆಲಸ ಮಾಡ್ತಾ ಇದ್ದಾರೆ. ಮಂತ್ರಿಗಳ ಒತ್ತಡದಿಂದ ಆ ರೀತಿ ಮಾಡುತ್ತಿದ್ದಾರೆ.
ಬಿಜೆಪಿಯಲ್ಲಿರುವ ಮಂತ್ರಿಗಳು, ಸಿಎಂ ಬಸವರಾಜ ಬೊಮ್ಮಾಯಿ ಮೊದಲುಗೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಸಹ ಕೇಸ್ ಹಾಕಬೇಡಿ ಎಂದು ಒತ್ತಡ ಹಾಕಿದ್ದಾರೆ. ಈ ಮಾಹಿತಿಯನ್ನು ಬಿಜೆಪಿಯವರೇ ನನಗೆ ಕೊಟ್ಟಿದ್ದು ಎಂದಿದ್ದಾರೆ.
ಇದನ್ನೂ ಓದಿ: GST Raid: ಜಿಎಸ್‌ಟಿ ಅಧಿಕಾರಿಗಳ ದಾಳಿ; ಬಿಜೆಪಿ ಆಕಾಂಕ್ಷಿಗೆ ಸೇರಿದ 3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ