ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವಿರುದ್ಧ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಮಾಡಿದ್ದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ(ಇಡಿ) ದೂರು ನೀಡುವುದಾಗಿ ಕಾಂಗ್ರೆಸ್ (Karnataka Congress) ತಿಳಿಸಿದೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಕ್ತಾರ ಲಕ್ಷ್ಮಣ್, ಸುಧಾಕರ್ ಅವರೇ ನೀವು 2008ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಎಲ್ಲಿ ಕೆಲಸ ಮಾಡುತ್ತಿದ್ದಿರಿ? ಈಗ ಎಷ್ಟು ಕೋಟಿಗೆ ಬಾಳುತ್ತೀರಿ ಎಂದು ಬಹಿರಂಗ ಚರ್ಚೆಗೆ ಬನ್ನಿ. ಅಥವಾ ತನಿಖೆ ನಡೆಯಲಿ.
ಸಚಿವರಾದ ನಂತರ ಎಷ್ಟು ಹಣ ಲೂಟಿ ಮಾಡಿದ್ದೀರಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಮ ಅವರು ಮಾಧ್ಯಮಗೋಷ್ಠಿ ಮಾಡಿ ಮಾಹಿತಿ ದಾಖಲೆ ನೀಡಿದ್ದಾರೆ. ಕೆಂಪಣ್ಣ ಅವರ ಪ್ರಕಾರ 2 ಸಾವಿರ ಕೋಟಿಯಷ್ಟು ಕಾಮಗಾರಿ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ದು, ಅದನ್ನು ಇವರು ಟೆಂಡರ್ ಹಾಕುವ ಮುನ್ನವೇ ಶೇ.5ರಷ್ಟು ಕಮಿಷನ್ ನೀಡಬೇಕು. ಅರ್ಜಿ ಹಾಕಿದ ನಂತರ ಶೇ.5ರಷ್ಟು, ಟೆಂಡರ್ ಸಿಕ್ಕ ನಂತರ ಮೊದಲ ಹಂತದಲ್ಲಿ ಶೇ.10ರಷ್ಟು, ಕಾಮಗಾರಿ ಶೇ.75ರಷ್ಟು ಮುಗಿಯುವ ಒಳಗೆ ಉಳಿದ ಶೇ.20ರಷ್ಟು ಕಮಿಷನ್ ನೀಡಬೇಕಾಗಿದೆ. ಇದು ಕೆಂಪಣ್ಣನವರ ಆರೋಪ.
ಇನ್ನು ಚಿಕ್ಕಬಳ್ಳಾಪುರದ ಜನರ ಪ್ರಕಾರ ಬಿಜೆಪಿ ಮಾಜಿ ಶಾಸಕರು ಸುಧಾಕರ್ ಅವರ ಅಕ್ರಮಗಳ ಬಗ್ಗೆ ಸುಮಾರು 40 ದೂರುಗಳನ್ನು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರತಿ ಉಪಕರಣ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ. 50 ರೂ ಬೆಲೆಯ ಮಾಸ್ಕ್ ಅನ್ನು 350 ರೂ.ಗೆ ಖರೀದಿ ಮಾಡಿದ್ದಾರೆ. ಸುಧಾಕರ್ ಅವರು ಸಚಿವರಾದ ನಂತರ ಆಸ್ಪತ್ರೆ ಬೆಡ್ ದಂಧೆ ಮಾಡಿದ್ದಾರೆ. ಎಲ್ಲ ಉಪಕರಣಗಳಲ್ಲಿ ಸುಳ್ಲು ಲೆಕ್ಕ ಬರೆದು 100 ಕೋಟಿ ಖರ್ಚಾದರೆ 400 ಕೋಟಿ ಮಾಡಿ ಲೂಟಿ ಮಾಡಿದ್ದಾರೆ. ಸುಮಾರು ಇವರೊಬ್ಬರೇ 1200 ಕೋಟಿ ಲೂಟಿ ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಮಾತನಾಡಿದರೆ ಕೇಸ್ ಹಾಕುತ್ತಾರೆ. ಕನ್ನಡಪ್ರಭದ ಸಿಬ್ಬಂದಿಯೊಬ್ಬ ಈತನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದರು.
ಚಿಕ್ಕಬಳ್ಳಾಪುರದಲ್ಲಿನ ಶೇ.60ರಷ್ಟು ಸಿವಿಕ್ ಕಾಮಗಾರಿಗಳನ್ನು ಇವರ ಸಂಬಂಧಿಕರಿಗೆ ಗುತ್ತಿಗೆ ನೀಡಲಾಗಿದೆ. ಇವರು ತಮ್ಮ ಪತ್ನಿ ಹೆಸರಲ್ಲಿ ಸಾಕಷ್ಟು ಚೆಕ್ ಪಡೆದಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ನೀವು ತನಿಖೆ ಮಾಡಿಸಿ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿ. ನೀವು ಕಾಂಗ್ರೆಸ್ ಶಾಸಕರಾಗಿದ್ದ ಸಂದರ್ಭದಲ್ಲಿ ಡೈರಿಯಲ್ಲಿ 1 ಸಾವಿರ ಕೋಟಿ ನಮೂದನೆಯಾಗಿದೆ ಎಂದು ಅದನ್ನು ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡಲಾಗಿದೆ ಎಂದು ಹೇಳುತ್ತೀರಿ. ಅದನ್ನು ನೀವು ತೆಗೆದುಕೊಂಡು ಹೋಗಿ ಕೊಟ್ಟಿದ್ದೀರಾ? ನಾವು ಸುಧಾಕರ್ ಅವರ ವಿರುದ್ಧ ಇಡಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದರು.
ಇದನ್ನೂ ಓದಿ : BJP Karnataka : ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು: ಸಚಿವ ಡಾ. ಕೆ. ಸುಧಾಕರ್ ಆರೋಪ
ನಿಮಗೆ ಯೋಗ್ಯತೆ ಇದ್ದರೆ ನೀವು ದಾಖಲೆ ಸಮೇತ ಚರ್ಚೆಗೆ ಬನ್ನಿ, ನಾವು ಕೂಡ ಚರ್ಚೆಗೆ ಬರುತ್ತೇವೆ. ಇಂದು ನೀವು 2 ಸಾವಿರ ಕೋಟಿಗೂ ಹೆಚ್ಚಿನ ಆಸ್ತಿ ಪಡೆದಿದ್ದೀರಿ ಎಂದು ಜನ ಮಾತನಾಡುತ್ತಿದ್ದಾರೆ. ಈ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. 2008ರ ಹಿಂದೆ ಏನಾಗಿದ್ದಿರಿ. ನಿಮಗೆ ಟಿಕೆಟ್ ನೀಡುವಾಗ ವೀರಪ್ಪ ಮೊಯ್ಲಿ ಅವರು, ನೀವೊಬ್ಬ ಫ್ರಾಡ್ ನಿಮಗೆ ಟಿಕೆಟ್ ನೀಡಬಾರದು ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಈಗ ಪಶ್ಚಾತಾಪ ಪಡುತ್ತಿದ್ದಾರೆ. ಇವರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಮುಖ್ಯಮಂತ್ರಿಗಳು ಇವರನ್ನು ಕೇಳುವುದಿಲ್ಲ.
ಬೊಮ್ಮಾಯಿ ಅವರು ರಾತ್ರಿ 7ರ ನಂತರ ಯಾರಿಗೂ ಲಭ್ಯವಾಗುವುದಿಲ್ಲ. ಕೇವಲ ಸುಧಾಕರ್ ಅವರ ಜತೆ ಇರುತ್ತಾರೆ. ಸುಧಾಕರ್ ಏನೇ ಮಾಡಿದರು ಅದನ್ನು ಸಹಿಸಿಕೊಂಡಿರುತ್ತಾರೆ. ದೇಶದ ಇತಿಹಾಸದಲ್ಲಿ ಮುಖ್ಯಮಂತ್ರಿ ಚೆಕ್ ಮೂಲಕ ಲಂಚ ಪಡೆದು ಜೈಲು ಸೇರಿದ ಇತಿಹಾಸ ಬಿಜೆಪಿ ಸರ್ಕಾರಕ್ಕಿದೆ. ಇವರು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಮುನ್ನ ಸಾಕ್ಷ್ಯಾಧಾರಗಳನ್ನು ನೀಡಲಿ. ಶಿವಕುಮಾರ್ ಅವರು ಸುಮಾರು 25 ಸಾವಿರ ಲೈನ್ ಮ್ಯಾನ್ ಗಳಿಗೆ ಕೆಲಸ ನೀಡಿದರು. ಆ ಪೈಕಿ ಯಾರಾದರೂ ಒಬ್ಬರು ಇವರ ವಿರುದ್ಧ ಹಗರಣದ ಆರೋಪ ಮಾಡಿದ್ದಾರಾ? ಶಿವಕುಮಾರ್ ಅವರು ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ, ಮೆಡಿಕಲ್ ಕಾಲೇಜು, ಮಾಲುಗಳನ್ನು ಹೊಂದಿರುವ ಉದ್ಯಮಿ. ಅವರು ತಮ್ಮ ವ್ಯಾಪಾರ ವ್ಯವಹಾರಗಳ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೂ ನೀವು ನಿಮ್ಮ ಐಟಿ ಇಡಿ ದಾಳಿ ನಡೆಸಿ ನಿಮಗೆ 35 ಜತೆ ಪಂಚೆ, ಜುಬ್ಬಾ ಸಿಗುತ್ತೆ. ಅದನ್ನು ಬೇಕಾದರೆ ಹೊತ್ತುಕೊಂಡು ಹೋಗಿ ಎಂದರು.