Site icon Vistara News

Karnataka Congress: ಜಡ್ಜನ್ನು ಬುಕ್‌ ಮಾಡಿಕೊಂಡರೆ ಸಾಕು; ಆಪರೇಷನ್‌ ಕಮಲವೇ ಬೇಡ: ಬಿಜೆಪಿ ಕುರಿತು ದಿನೇಶ್‌ ಗುಂಡೂರಾವ್ ಹೇಳಿಕೆ

dinesh gundu rao

ಬೆಂಗಳೂರು: ಶಾಸಕರ ಮೇಲೆ ಕೇಸ್‌ ಹಾಕಿ ಜಡ್ಜನ್ನು ಬುಕ್‌ ಮಾಡಿಕೊಂಡರೆ ಸಾಕು ಎಂದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸೂರತ್‌ ನ್ಯಾಯಾಲಯ 2 ವರ್ಷ ಶಿಕ್ಷೆ ನೀಡಿರುವ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆ ನೀಡಿದ್ದಾರೆ.

ರಾಹುಲ್‌ ಗಾಂಧಿಗೆ ಶಿಕ್ಷೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಕಾಂಗ್ರೆಸ್‌ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ದಿನೇಶ್‌ ಗುಂಡೂರಾವ್‌ ಮಾತನಾಡಿದರು.

ಈ ರೀತಿ ಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಗತ್ತೆ ಅಂದ್ರೆ ನಂಬೋದಕ್ಕೆ ಸಾಧ್ಯ ಇಲ್ಲ. ಕಳೆದ 7-8 ವರ್ಷಗಳಲ್ಲಿ ಜನತಂತ್ರ ವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಾರೆ. ಚುನಾವಣೆ ಬಂದಾಗ ವಿರೋಧಿಗಳನ್ನ ಟೀಕೆ ಮಾಡುತ್ತೇವೆ, ನಮ್ಮನ್ನ ಕೂಡ ವಿರೋಧಿಸಿ ಮಾತಾಡ್ತಾರೆ.

ಸಿಟಿ ರವಿ, ಈಶ್ವರಪ್ಪ, ನಳಿನ್‌ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಬೆಂಕಿ ಹಚ್ಚುವ ಮಾತುಗಳನ್ನ ಆಡುತ್ತಾರೆ. ನಾಥುರಾಮ್ ಗೋಡ್ಸೆ ಪೂಜಿಸುವ ಮಾತುಗಳನ್ನ ಸಂಸದರೇ ಆಡ್ತಾರೆ. ಒಂದು ಸಮುದಾಯವನ್ನ ಗುರಿಯಾಗಿಸಿಕೊಂಡು ಗೋಲಿ ಮಾರೋ ಸಾಲೋಂಕೊ ಅಂತ ಮಾತಾಡ್ತಾರೆ. ಇದಕ್ಕಿಂತ ರಾಹುಲ್ ಮಾತನಾಡಿದ್ದು ಏನಿತ್ತು?

ನಮ್ಮ ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದುಕೊಂಡು ಹೋದವರ ಬಗ್ಗೆ ಮಾತನಾಡಿದ್ದು ಅವರು. ಈ ವೇಳೆ ಮೋದಿ ಸರ್ ನೇಮ್ ಬಳಸಿ ಮಾತನಾಡಿದ್ರು. ಆದ್ರೆ ಮಹಾನ್ ಮೋಸಗಾರ ಅದಾನಿ ಬಗ್ಗೆ ಪ್ರಧಾನಿ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ಈಗ ಕೇಸ್ ಓಪನ್ ಆಯ್ತು. ಆಪರೇಷನ್ ಕಮಲ ಮಾಡುವುದು ಬೇಡ, ಶಾಸಕರ ಮೇಲೆ ಕೇಸ್ ಹಾಕಿ ಜಡ್ಜನ್ನ ಬುಕ್ ಮಾಡಿಕೊಂಡರೆ ಸಾಕು. ಯಾರಾದರೂ ಎರಡು ವರ್ಷ ಶಿಕ್ಷೆ ಕೊಡ್ತಾರೇನ್ರೀ? ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಕೆಜೆ ಜಾರ್ಜ್ ಮಾತನಾಡಿ, ಇವತ್ತು ಪ್ರಜಾಪ್ರಭುತ್ವದಲ್ಲಿ ಕರಾಳ ದಿನ. ಕುತಂತ್ರ ಮಾಡಿ ಬಿಜೆಪಿ ನಾಯಕರು ಚುನಾವಣೆ ಗೆದ್ದಿದ್ದಾರೆ. ರಾಹುಲ್ ಗಾಂಧಿ ಹೇಳಿದ ಮಾತು ತಪ್ಪಿಲ್ಲ. ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಗುಜಾರಾತ್ ನಲ್ಲಿ ಕೋರ್ಟ್ ಗೆ ಹಾಕ್ತಾರೆ. ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರ್ತಿದೆ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಜನರನ್ನ ಕರೆದುಕೊಂಡು ಬನ್ನಿ ಅಂತಾ ಅಧಿಕಾರಿಗಳಿಗೆ ಹೇಳಿದ್ದಾರೆ.

ಅವರು ಕಾಂಗ್ರೆಸ್ ಪಕ್ಷವನ್ನ ಹಿಯ್ಯಾಳಿಸುವ ಭಾಷಣ ಮಾಡ್ತಿದ್ದಾರೆ. ದಾವಣಗೆರೆಯಲ್ಲಿ ಟೆಕ್ಸ್ ಟೈಲ್ಸ್ ಮಾಡ್ತಿವಿ ಅಂತಾ ಹೇಳ್ತಾರೆ. ಬರಗಾಲ ಕೋವಿಡ್ ನಲ್ಲಿ ನೀವು ನೆರವಿಗೆ ಬರಲಿಲ್ಲ. ಕರ್ನಾಟಕ ಜನರು ಬುದ್ದಿವಂತರು. ಇಂದಿರಾಗಾಂಧಿ ಅವರನ್ನ ಚಿಕ್ಕಮಗಳೂರಿಂದ ಗೆದ್ದು ಕಳಿಸಿದ್ದೆವು. ನಿಮ್ಮ ಬಹುಮತ ಇದೆ ಅಂತ ಅನರ್ಹ ಮಾಡಿದ ನಂತರ ಜನರು ಎರಡುವರೆ ವರ್ಷದಲ್ಲೇ ಬುದ್ದಿ ಕಲಿಸಿದ್ರು. ಇವತ್ತು ಜನ, ಯುವಕರು, ಕಾರ್ಮಿಕರು, ಮಹಿಳೆಯರು ನಮ್ಮ ಜೊತೆ ಇದ್ದಾರೆ. ಈ ಪ್ರತಿಭಟನೆ ಬೆಂಕಿ ಹೆಬ್ಬಿದ ಹಾಗೆ ಇಡೀ ದೇಶದಲ್ಲಿ ಹರಡುತ್ತೆ ಎಂದರು.

Exit mobile version