ಬೆಂಗಳೂರು: ಈಗಾಗಲೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಎದ್ದಿರುವ ಬಂಡಾಯವನ್ನು ತಣಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಇದು ಸುಳ್ಳು ಎಂದು ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ತಿಳಿಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರಕ್ಕೆ ಎನ್.ವೈ. ಗೋಪಾಲಕೃಷ್ಣ ಅವರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧೆ ಮಾಡುವ ಸಲುವಾಗಿ ಮೊಳಕಾಲ್ಮೂರು ಟಿಕೆಟ್ ಪಡೆಯಲು ಎನ್.ವೈ. ಗೋಪಾಲಕೃಷ್ಣಗೆ ಸಾಧ್ಯವಾಗಿರಲಿಲ್ಲ. ಅವರನ್ನು ಕೂಡ್ಲಿಗಿ ಕ್ಷೇತ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಗೆದ್ದಿದ್ದ ಗೋಪಾಲಕೃಷ್ಣ, ಈ ಬಾರಿ ಮೊಳಕಾಲ್ಮೂರಿಗೇ ಮರಳುವುದಾಗಿ ಹೇಳಿದ್ದರು.
ಆದರೆ ವರಿಷ್ಠರು ಇದಕ್ಕೆ ಒಪ್ಪದಿದ್ದಾಗ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ತೆರಳಿದ್ದರು. ಇದೀಗ ಕಾಂಗ್ರೆಸ್ ಟಿಕೆಟ್ ಪಡೆದಿರುವುದರಿಂದ ಮೊಳಕಾಲ್ಮೂರಿನಲ್ಲೇ ಇರುವ ಆಕಾಂಕ್ಷಿ ಯೋಗೇಶ್ ಬಾಬು ಅಸಮಾಧಾನಗೊಂಡಿದ್ದಾರೆ.
ಅಸಮಾಧಾನಗೊಂಡ ಯೋಗೇಶ್ ಬಾಬು ಹಾಗೂ ಬೆಂಬಲಿಗರನ್ನು ಬೆಂಗಳೂರಿನಲ್ಲಿ ಶುಕ್ರವಾರ ಭೇಟಿ ಮಾಡಿದ ಶಿವಕುಮಾರ್, ಸಂಧಾನ ಪ್ರಯತ್ನ ನಡೆಸಿದರು. ನಂತರ ತಮ್ಮ ಟ್ವಿಟರ್ ಖಾತೆಯಲ್ಲಿ ಯೋಗೇಶ್ ಬಾಬು ಜತೆಗಿನ ಫೋಟೊ ಹಂಚಿಕೊಂಡಿದ್ದರು.
“ಟಿಕೆಟ್ ಸಿಗದೆ ನೊಂದಿದ್ದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀ ಯೋಗೇಶ್ ಬಾಬು ಅವರೊಂದಿಗೆ ಇಂದು ಯಶಸ್ವಿ ಸಂಧಾನ ಮಾತುಕತೆ ನಡೆಸಲಾಯಿತು. ಅವರ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಸಂತೈಸಲಾಯಿತು” ಎಂದಿದ್ದರು.
ಆದರೆ ಡಿ.ಕೆ. ಶಿವಕುಮಾರ್ ಟ್ವಟರ್ ಪೋಸ್ಟ್‌ಗೆ ಯೋಗೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಂಧಾನ ಯಶಸ್ವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿದ್ದಾರೆ. ನಾನು ಪ್ರವಾಸ ಮಾಡಿ ಜನರನ್ನು ಸಂಪರ್ಕಿಸಿದ್ದೇನೆ. ಗ್ರಾಮ ಪಂಚಾಯತಿವಾರು ಅಭಿಪ್ರಾಯ ಕೇಳುತ್ತಿದ್ದೇನೆ. ಬೇರೆ ಯಾವುದೋ ಗಂಭೀರ ವಿಚಾರದ ಚರ್ಚೆಗಾಗಿ ಡಿ.ಕೆ. ಶಿವಕುಮಾರ್ ಕರೆದಿದ್ದರು. ಆದರೆ ಅದರ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮೊಳಕಾಲ್ಮೂರಿಂದ ಸ್ಪರ್ಧೆ ಮಾಡುವುದು ಖಚಿತ. ಚರ್ಚೆ ಮಾಡಿದ್ದ ಗಂಭೀರ ವಿಷಯ ಯಾವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Karnataka Elections 2023 : 8 ಹಾಲಿ ಶಾಸಕರಿಗೆ ಟಿಕೆಟ್ ಮಿಸ್, 8 ಮಹಿಳೆಯರಿಗೆ ಚಾನ್ಸ್; ಬಾಕಿ ಉಳಿದಿವೆ 35 ಕ್ಷೇತ್ರಗಳು