ಬೆಂಗಳೂರು: ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಡಿಕೆ ಶಿವಕುಮಾರ್, ಸಿದ್ದರಾಮ್ಯನವರ ಮೇಲೆ ಡಾ.ಜಿ ಪರಮೇಶ್ವರ್ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ಇವರನ್ನು ಸಮಾಧಾನಪಡಿಸಲು ಉಸ್ತುವಾರಿ ರಣದೀಪ್ ಸುರ್ಜೇವಾಲ ಧಾವಿಸಿದ್ದಾರೆ.
ತಮ್ಮೊಡನೆ ಚರ್ಚೆ ನಡೆಸದೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಭರವಸೆಗಳನ್ನು ಘೋಷಿಸುತ್ತಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು, ಜೊತೆಗೆ ಜಮೀನು ಇಲ್ಲದವರಿಗೆ ಸರ್ಕಾರದಿಂದ ಭೂಮಿ ನೀಡುವ ಘೋಷಣೆ, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳ ಘೋಷಣೆ ಮಾಡಲಾಗುತ್ತಿದೆ. ಜಿಲ್ಲಾ ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಆಪ್ತರ ಬಳಿ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ.
ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಷ್ಟೇ ಏಕೆ, ಡಿಸಿಎಂ ಆಗಿ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನದೇ ಆದ ಕೊಡುಗೆ ಇದೆ. ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಹ ಆಗಿದ್ದೇನೆ. ಆದರೂ ನನ್ನನ್ನು ಕಡೆಗಣಿಸಿ ಉಚಿತ ಯೋಜನೆಗಳ ಘೋಷಣೆ ಮಾಡುತ್ತಿದ್ದಾರೆ ಎಂದು ಬೇಸರ ತೋಡಿಕೊಂಡಿದ್ದಾರೆ. ಅವರು ಬೇಸರಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಸುರ್ಜೇವಾಲ ಅವರು ಪರಮೇಶ್ವರ್ ನಿವಾಸಕ್ಕೆ ಧಾವಿಸಿದ್ದು, ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಭೇಟಿ ವೇಳೆಯಲ್ಲಿ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Karnataka Congress : ಡಾ. ಸುಧಾಕರ್ ಒಬ್ಬ ಪೆದ್ದ, ಅವನಿಗೆ ಸಿಎಜಿ ರಿಪೋರ್ಟ್ ಓದೋಕೆ ಬರಲ್ಲ: ಸಿದ್ದರಾಮಯ್ಯ ವಾಗ್ದಾಳಿ