Site icon Vistara News

Karnataka Politics: ಡಿಸೆಂಬರ್‌ ಒಳಗೆ ಕಾಂಗ್ರೆಸ್‌ ಸರ್ಕಾರ ಪತನ; ನಳಿನ್‌ ಭವಿಷ್ಯ

Nalin kumar kateel

ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಡಿಸೆಂಬರ್ ಒಳಗೆ ಪತನವಾಗಲಿದೆ (Congress Government) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel) ಭವಿಷ್ಯ ನುಡಿದಿದಿದ್ದಾರೆ. ಸಿಎಂ ಅಧಿಕಾರ ಹಂಚಿಕೆ ಸೂತ್ರವೇ ಕಾಂಗ್ರೆಸ್‌ಗೆ (Chief Ministership) ಮುಳುವಾಗಲಿದೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಾ ಅವರು ಹೇಳಿದರು.

ಸಿದ್ದರಾಮಯ್ಯ (Siddaramaiah) ಅವರ ಬಣದವರು ಅವರೇ ಮುಂದಿನ ಐದು ವರ್ಷಗಳ ಕಾಲ ಸಿಎಂ ಎಂದು ಹೇಳಲು ಆರಂಭಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಪಕ್ಷದಲ್ಲಿ ದೊಡ್ಡ ಗಲಾಟೆ ಆಗಲಿದ್ದು, ಅದು ಸರ್ಕಾರದ ಪತನಕ್ಕೆ ಕಾರಣವಾಗಲಿದೆ. 2023ರ ಡಿಸೆಂಬರ್‌ ಒಳಗೆ ಸರ್ಕಾರ ಉರುಳಲಿದೆ ಎಂದು ಹೇಳಿದರು ನಳಿನ್‌ ಕುಮಾರ್‌ ಕಟೀಲ್‌.

ಎಫ್‌ಕೆಸಿಸಿಐ ಬಂದ್‌ ಕರೆಗೆ ನೈತಿಕ ಬೆಂಬಲ

ಸಿದ್ದರಾಮಯ್ಯ ಸರ್ಕಾರ ಒಂದು ಕಡೆ ಉಚಿತ ವಿದ್ಯುತ್‌ ಎಂದು ಹೇಳಿ, ಇನ್ನೊಂದೆಡೆ ವಿದ್ಯುತ್‌ ದರ ಹೆಚ್ಚಳ ಮಾಡಿದೆ. ಇದರಿಂದ ಉದ್ಯಮಗಳಿಗೆ ಭಾರಿ ಅನ್ಯಾಯ ಮಾಡಲಾಗುತ್ತಿದೆ. ಈಗಾಗಲೇ ಉದ್ಯಮಿಗಳು ಹೋರಾಟಕ್ಕೆ ಕರೆ ನೀಡಿದ್ದಾರೆ. ಜೂನ್‌ 22ರಂದು ಉದ್ಯಮ ಬಂದ್‌ ಮಾಡಿ ಪ್ರತಿಭಟನೆ ನಡೆಸುವ ಅವರ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಪ್ರಕಟಿಸಿದರು.

ನಾವು ವಿದ್ಯುತ್‌ ದರ ಹೆಚ್ಚಿಸಿಲ್ಲ ಎಂದ ಕಟೀಲ್‌

ಕಾಂಗ್ರೆಸ್‌ ಸರ್ಕಾರ ಬಂದ ಕೂಡಲೇ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಕಡೆ ಮಳೆ ಕಡಿಮೆಯಾಗಿದೆ. ಅಡಿಕೆಗೆ ನೀರು ಕಟ್ಟಲು ವಿದ್ಯುತ್ ಸಿಗುತ್ತಿಲ್ಲ ಎಂದು ಹೇಳಿದ ನಳಿನ್‌ ಕುಮಾರ್‌ ಕಟೀಲ್‌ ಅವರು, ನಮ್ಮ ಅವಧಿಯಲ್ಲಿ ನಿಯಮಿತವಾಗಿ ವಿದ್ಯುತ್‌ ನೀಡಲಾಗುತ್ತಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದೆ ಎಂದು ಹೇಳಿದರು. ಜನರು ಸರ್ಕಾರದ ಲೋಡ್‌ ಶೆಡ್ಡಿಂಗ್‌, ವಿದ್ಯುತ್‌ ದರ ಏರಿಕೆ ವಿರುದ್ಧ ಆಕ್ರೋಶಿತರಾಗಿದ್ದಾರೆ ಎಂದರು.

ನಮ್ಮ ಸರ್ಕಾರ ಇದ್ದಾಗ ವಿದ್ಯುತ್‌ ದರ ಹೆಚ್ಚಿಸಿರಲಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅದು ಜಾರಿಯಾಗಿದೆ ಎಂದ ಕಟೀಲ್‌, ಒಂದು ವೇಳೆ ನಾವೇ ಏರಿಕೆಗೆ ಅವಕಾಶ ಕೊಟ್ಟಿದ್ದೇವೆ ಎಂದಿಟ್ಟುಕೊಳ್ಳೋಣ. ಪಠ್ಯ ಪರಿಷ್ಕರಣೆ ಮಾಡುವ ಈ ಸರ್ಕಾರಕ್ಕೆ, ವಿದ್ಯುತ್ ದರ ವಾಪಸ್ ಪಡೆಯಕ್ಕಾಗಲ್ವಾ ಎಂದು ಪ್ರಶ್ನಿಸಿದರು.

ನಾವು ಹೊಂದಾಣಿಕೆ ಮಾಡಿಲ್ಲ

ಹೊಂದಾಣಿಕೆ ರಾಜಕೀಯವೇ ಬಿಜೆಪಿಗೆ ಮುಳುವಾಯಿತು ಎಂಬ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಾವು ಹೊಂದಾಣಿಕೆ ರಾಜಕೀಯ ‌ಮಾಡಿಲ್ಲ. ನಾವು ಹೋರಾಟ ಮಾಡಿಯೇ ಬಂದಿದ್ದೇವೆ. ಡಿಕೆಶಿ ವಿರುದ್ಧವಾಗಿ ಅಶೋಕ್ ನಿಂತಿದ್ದರು , ಸೋಮಣ್ಣ ಎಲ್ಲಾ ಸ್ಪರ್ಧೆ ಮಾಡಿದ್ದರು. ಅವರ ಅವರ ಭಾವನೆಗೆ ತಕ್ಕಂತೆ ಮಾತನಾಡಿದವರನ್ನು, ನಾವು ಕರೆದು ಮಾತನಾಡುತ್ತೇವೆ ಎಂದು ಹೇಳಿದರು ನಳಿನ್‌ ಕುಮಾರ್‌ ಕಟೀಲ್‌.

ಜೂನ್‌ 22ರಿಂದ ನಮ್ಮ ಹೋರಾಟ ಶುರು

ಕಾಂಗ್ರೆಸ್‌ನ ಒಳ್ಳೆಯ ಆಡಳಿತಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಆದರೆ, ಜನವಿರೋಧಿಯಾದರೆ, ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಜನಪರ ಹೋರಾಟ ಖಂಡಿತ ಎಂದ ಅವರು, ʻʻಜನರಿಗೆ ಸಮಸ್ಯೆ ಆಗುತ್ತಿರುವುದರಿಂದ ನಾವು ಹೋರಾಟ ಮಾಡ್ತಿದ್ದೇವೆ. ಇದೇ 22ರಿಂದ ನಮ್ಮ ಹೋರಾಟ ಶುರು ಆಗಲಿದೆ. ಕೇಂದ್ರದ ಸಾಧನಾ ಸಮಾವೇಶ ನಡೆಯಲಿದೆ. ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜೂನ್‌ 22ರಿಂದ ರಾಜ್ಯಾದ್ಯಂತ ಪ್ರವಾಸ ನಡೆಯಲಿದೆ ಎಂದು ಹೇಳಿದರು.

ʻʻರಾಜ್ಯ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಮಾಡ್ತೇವೆ. ಜೂನ್‌ 22ರಿಂದ ಎಲ್ಲ ಜಿಲ್ಲೆಗಳಿಗೆ 6 ತಂಡಗಳಾಗಿ ಹೋಗಲಿದ್ದೇವೆ. ಕೇಂದ್ರದ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡ್ತೇವೆ. ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆಯೂ ಜನರಿಗೆ ತಿಳಿಸುತ್ತೇವೆʼʼ ಎಂದು ನಳಿನ್‌ ಹೇಳಿದರು.

ಜುಲೈ 7ರಿಂದ ಆರಂಭವಾಗಲಿರುವ ಬಜೆಟ್‌ ಅಧಿವೇಶನಕ್ಕೆ ಮುನ್ನ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Rice Politics: ಅಕ್ಕಿ ರಾಜಕೀಯ ತೀವ್ರ; ನಾಳೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

Exit mobile version