ಬೆಂಗಳೂರು: ಕಾಂಗ್ರೆಸ್‌ನಲ್ಲಿ ಈಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಯ ಟ್ರೆಂಡ್ ಆರಂಭವಾದಂತಿದೆ. ಮಾಜಿ ಸಿಎಂ ಸಿದ್ದರಾಮಯ್ಯ 2018ರಲ್ಲಿ ಡಬಲ್ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಒಂದರಲ್ಲಿ ಸೋತು ಇನ್ನೊಂದರಲ್ಲಿ ಸದಸ್ಯತ್ವ ಉಳಿಸಿಕೊಂಡಿದ್ದರು. ಈ ಬಾರಿಯೂ ವರುಣ ಕ್ಷೇತ್ರದ ಜತೆಗೆ ಕೋಲಾರದಲ್ಲೂ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್‌ನಲ್ಲಿ ಬೇರೆ ಯಾವುದೇ ನಾಯಕರಿಗೆ ಇಲ್ಲದ ಈ ಸ್ಪೆಷಲ್ ಆಫರ್ ಸಿದ್ದರಾಮಯ್ಯ ಅವರಿಗೆ ಮಾತ್ರ ಏಕೆ ಎನ್ನುವುದು ಆ ಪಕ್ಷದಲ್ಲಿ ನಡೆಯುತ್ತಿರುವ ಚರ್ಚೆ. ಮೊದಲನೆಯದಾಗಿ ಅವರು ಮೂಲ ಕಾಂಗ್ರೆಸಿಗರಲ್ಲ. ಎರಡನೆಯದಾಗಿ, ಇಷ್ಟು ಹಿರಿಯ ನಾಯಕರಾಗಿ ಒಂದು ಕ್ಷೇತ್ರವನ್ನು ನೆಲೆಯಾಗಿ ಕಂಡುಕೊಂಡಿಲ್ಲ ಎಂದೂ ಅನೇಕರು ಆಕ್ಷೇಪಿಸುತ್ತಿದ್ದಾರೆ.
ಇದೀಗ ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ಡಾ. ಜಿ. ಪರಮೇಶ್ವರ ಸಹ ಎರಡು ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಎರಡೂ ಕಡೆ ಖಚಿತ ಮಾಡುವುದನ್ನೇ ನಿರೀಕ್ಷಿಸುತ್ತಿದ್ದ ನಾಯಕ, ಇದೀಗ ಖಚಿತ ಆಗಿದೆ ಎಂಬ ಸಂದೇಶ ಲಭಿಸುತ್ತಲೇ ತಮಗೂ ಇನ್ನೊಂದು ಕಡೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.
ಮಾರ್ಚ್ 30ರಂದು ನಡೆದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಕೊರಟಗೆರೆ ವಿಧಾನಸಭೆ ಕ್ಷೇತ್ರದ ಜತೆಗೆ ಬೆಂಗಳೂರಿನ ಪುಲಿಕೇಶಿ ನಗರದಲ್ಲೂ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸ್ಕ್ರೀನಿಂಗ್ ಸಭೆಯಿಂದ ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಇದು ಸ್ವಂತಕ್ಕೆ ಟಿಕೆಟ್ ಪಡೆಯುವ ತಂತ್ರವೋ ಅಥವಾ ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ತಪ್ಪಿಸುವ ತಂತ್ರವೋ ಎನ್ನುವುದು ತಿಳಿಯಬೇಕಷ್ಟೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪುಲಿಕೇಶಿನಗರವನ್ನು ಘೋಷಣೆ ಮಾಡಿಲ್ಲ.
ಇದನ್ನೂ ಓದಿ: Congress ticket : ಆರು ಹಾಲಿ ಕಾಂಗ್ರೆಸ್ ಶಾಸಕರ ಟಿಕೆಟ್ ಹೋಲ್ಡ್, ಮೂರು ಕಡೆ ಪಕ್ಷ ಬಿಟ್ಟು ಹೋದವರಿಗಾಗಿ ವೇಟಿಂಗ್!