ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೆಣೆಸುವ 124 ಅಭ್ಯರ್ಥಿಗಳನ್ನು ಈಗಾಗಲೆ ಪ್ರಕಟಿಸಿರುವ ಕಾಂಗ್ರೆಸ್ ಎರಡನೇ ಪಟ್ಟಿಯನ್ನು ಬಹುತೇಕ ಸಿದ್ಧಫಡಿಸಿಕೊಂಡಿದ್ದು, ಮಾರ್ಚ್ 30ರ ನಂತರ ಬಿಡುಗಡೆ ಮಾಡಲಿದೆ. ಆದರೆ ಈ ಹಿಂದೆ ಆಪರೇಷನ್ ಕಮಲದ ವೇಳೆ ಬಿಜೆಪಿಗೆ ತೆರಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಯಾವುದೇ ಹೆಸರು ಅಂತಿಮಗೊಳಿಸದೆ ಖಾಲಿ ಬಿಡಲಾಗಿದೆ.
ಸೋಮವಾರ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಿಜೆಪಿಗೆ ಹೋದ ವಲಸಿಗರ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ವಲಸಿಗರ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವ ಆತುರ ನಿರ್ಧಾರ ಬೇಡ ಎಂದು ತೀರ್ಮಾನ ಮಾಡಲಾಗಿದೆ. ಯಲ್ಲಾಪುರದಲಿ ವಿ.ಎಸ್. ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಆಗಿ ಟಿಕೆಟ್ ಆಕಾಂಕ್ಷಿ ಆಗಿದ್ದರೂ ಟಿಕೆಟ್ ಫೈನಲ್ ಮಾಡಿಲ್ಲ. ಸಚಿವ ಶಿವರಾಂ ಹೆಬ್ಬಾರ್ ಬರಬಹುದು, ಆಗ ಉಭಯ ನಾಯಕರನ್ನು ಕೂರಿಸಿ ಮಾತನಾಡಿ ಅಭ್ಯರ್ಥಿ ಫೈನಲ್ ಮಾಡುವ ಬಗ್ಗೆ ಚರ್ಚೆ ನಡೆದಿದೆ.
ಜೆಡಿಎಸ್‌ನಿಂದ ತೆರಳಿದ್ದ ಕೆ. ಗೋಪಾಲಯ್ಯ, ಕಾಂಗ್ರೆಸ್‌ನಿಂದ ತೆರಳಿದ್ದ ಬೈರತಿ ಬಸವರಾಜು, ಎಸ್.ಟಿ. ಸೋಮಶೇಖರ್ ವಾಪಸು ಬರುವ ನಿರೀಕ್ಷೆ ಹೊಂದಲಾಗಿದೆ. ಬರದಿದ್ದರೆ ಕೊನೆಯ ಲಿಸ್ಟ್‌ನಲ್ಲಿ ಅಭ್ಯರ್ಥಿ ಅಂತಿಮ ಮಾಡೋಣ ಎಂದು ನಿರ್ಧಾರ ಮಾಡಲಾಗಿದೆ. ಸಚಿವ ಮುನಿರತ್ನ ಶಾಸಕರಾಗಿರುವ ರಾಜರಾಜೇಶ್ವರಿನಗರಕ್ಕೆ ಈಗಾಗಲೆ ಕುಸುಮ ಅವರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದು, ಉಳಿದ ಕ್ಷೇತ್ರಗಳಲ್ಲಿ ಖಾಲಿ ಬಿಟ್ಟುಕೊಂಡಿದೆ.
ಬಿ ಪಟ್ಟಿಯಲ್ಲಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಮೊದಲ ಪಟ್ಟಿಯಲ್ಲಿರುವುದಕ್ಕಿಂತ ಸ್ವಲ್ಪ ಹೆಚ್ಚಿನ ಶ್ರಮ ಹಾಕಿದರೆ ಗೆಲ್ಲಬಹುದು ಎಂಬಂತಹ ಕ್ಷೇತ್ರಗಳನ್ನು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡಲಾಗುತ್ತದೆ. 50 ಕ್ಷೇತ್ರಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಿರುವ ಮಾಡಲಾಗುತ್ತದೆ. ಎಐಸಿಸಿಯ ಸಿಇಸಿ ಸಭೆ ಬಳಿಕ ಎರಡನೇ ಪಟ್ಟಿ ಬಿಡುಗಡೆ ಆಗುತ್ತದೆ. ಆದರೆ ಬಿಜೆಪಿ ಮೊದಲ ಪಟ್ಟಿ ಸಹ ಬಿಡುಗಡೆ ಮಾಡದಿರುವುದರಿಂದ ಕಾದುನೋಡುವ ತಂತ್ ಅನುಸರಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಪಕ್ಷದಲ್ಲಿ ಟಿಕೆಟ್ ವಿಚಾರಕ್ಕೆ ಗೊಂದಲ ಹಾಗೂ ಬಂಡಾಯದ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನೂರು ಬಂಡಾಯ ಏಳಲಿ. ಕಾಂಗ್ರೆಸ್ ಪಾರ್ಟಿಯಲ್ಲಿ ಬೇಕಾದಷ್ಟು ಜನ ಬರ್ತಾರೆ ಬೇಕಾದಷ್ಟು ಜನ ಹೋಗ್ತಾರೆ. ಬಂಡಾಯ ಬೇಕಾದಷ್ಟು ಆಗುತ್ತೆ. ಎಲ್ಲ ಪಾರ್ಟಿಯಲ್ಲಿ ಬಂಡಾಯ ಇರುತ್ತದೆ. ಕೆಲವರೆಲ್ಲಾ ಚಟ ತೀರಿಸಿಕೊಳ್ಳುತ್ತಾರೆ ತೀರಿಸಿಕೊಳ್ಳಲಿ ಬಿಡಿ. ಅಧಿಕಾರಕ್ಕೆ ಬರ್ತಾರೆ ಅಂತಾನೆ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ ಎಂದಿದ್ದಾರೆ.