ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ (Karnataka CM) ಯಾರಾಗಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತವಾರಿ ರಣದೀಪ್ ಸುರ್ಜೇವಾಲಾ, ವೀಕ್ಷಕರು ಸೇರಿ ಹಲವು ಮುಖಂಡರು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಮುಖ್ಯಮಂತ್ರಿ ಆಯ್ಕೆಯ ಅಂತಿಮ ನಿರ್ಧಾರವನ್ನು ಸುರ್ಜೇವಾಲಾ ಅವರು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಇನ್ನು, ಸೋಮವಾರ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂಬುದಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹಾಗೆಯೇ, 50:50 ಫಾರ್ಮುಲಾ ಬಹುತೇಕ ನಿಶ್ಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಂಗ್ರಿಲಾ ಹೋಟೆಲ್ ಎದುರು ನೂರಾರು ಅಭಿಮಾನಿಗಳ ಘೋಷಣೆಗಳ ಮಧ್ಯೆಯೇ ರಣದೀಪ್ ಸುರ್ಜೇವಾಲಾ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಅದರಲ್ಲೂ, ಸುರ್ಜೇವಾಲಾ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ರಾಜ್ಯದ ಇಬ್ಬರೂ ನಾಯಕರು ಮುಖ್ಯಮಂತ್ರಿ ಆಗುವ ಕುರಿತು ತಮ್ಮ ಅಭಿಲಾಷೆ, ಇದುವರೆಗೆ ಮಾಡಿದ ಕೆಲಸ, ಪಕ್ಷದ ಗೆಲುವಿಗೆ ವಹಿಸಿದ ಶ್ರಮದ ಕುರಿತು ಸುರ್ಜೇವಾಲಾ ಅವರಿಗೆ ಮನವರಿಕೆ ಮಾಡಿದರು.
ಇದಾದ ಬಳಿಕ ವೀಕ್ಷಕರೊಂದಿಗೆ ಕೂಡ ಸುರ್ಜೇವಾಲಾ ಮಾತುಕತೆ ನಡೆಸಿದರು. ಕೊನೆಗೆ, ಕಾಂಗ್ರೆಸ್‌ನ ಎಲ್ಲ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ, ಸಿಎಂ ಆಯ್ಕೆ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡೋಣ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಹಾಗಾಗಿ, ರಾಜ್ಯದ ಮುಖ್ಯಮಂತ್ರಿ ಆಯ್ಕೆಯ ವಿಚಾರವೀಗ ದೆಹಲಿ ಅಂಗಳ ತಲುಪಿದ್ದು, ಸೋಮವಾರವೇ ನೂತನ ಮುಖ್ಯಮಂತ್ರಿಯ ಆಯ್ಕೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಬ್ಬರೂ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸಿಎಲ್‌ಪಿ ಸಭೆಯಲ್ಲಿ ಒಂದೇ ಸಾಲಿನ ನಿರ್ಧಾರ ಏನು?
ರಾಜ್ಯ ಮುಖ್ಯಮಂತ್ರಿಯ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರೇ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಪಟ್ಟು ಹಿಡಿದ ಕಾರಣ ಸಭೆಯಲ್ಲಿ ಒಂದೇ ಸಾಲಿನ ನಿರ್ಣಯ ತೆಗೆದುಕೊಳ್ಳಲಾಯಿತು. ಎಐಸಿಸಿ ಅಧ್ಯಕ್ಷರೇ ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡಲಿ ಎಂಬ ನಿರ್ಣಯವನ್ನು ಸಿಎಲ್‌ಪಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆ ಮೂಲಕ ಸಿಎಂ ಆಯ್ಕೆ ನಿರ್ಧಾರವು ದೆಹಲಿ ಅಂಗಳಕ್ಕೆ ತಲುಪಿತು.
ಇದನ್ನೂ ಓದಿ: Karnataka Election Results: ಸಿಎಂ ಆಯ್ಕೆಗೆ ಕಸರತ್ತು; ಘೋಷಣೆ ಕೂಗಿ ಸಿದ್ದು, ಡಿಕೆಶಿ ಬೆಂಬಲಿಗರ ಹೈಡ್ರಾಮಾ
ಡಿಕೆಶಿಗೆ ಜನ್ಮದಿನದ ಉಡುಗೊರೆ?
ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜನ್ಮದಿನವಿದ್ದು, ಇದೇ ದಿನ ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯ ಉಡುಗೊರೆ ನೀಡಲಿದೆಯೇ ಎಂಬ ನಿರೀಕ್ಷೆ ಮೂಡಿದೆ. ಕೆಪಿಸಿಸಿ ಅಧ್ಯಕ್ಷರಾಗಿ, ಸಿದ್ದರಾಮಯ್ಯನವರ ಜತೆ ಪಕ್ಷ ಸಂಘಟನೆ ಮಾಡಿ, ಈಗ ಕಾಂಗ್ರೆಸ್‌ಗೆ ಬಹುಮತ ಬಂದಿದೆ. ಹಾಗಾಗಿ, ಡಿಕೆಶಿ ಅವರನ್ನೂ ಸಿಎಂ ಎಂಬುದಾಗಿ ಘೋಷಿಸಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.