ಬೆಂಗಳೂರು: ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಹೊಸ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಇದಕ್ಕೆ ನಮಸ್ಕಾರ ಮಾಡಿಯೇ ಮುಂದಿನ ಕೆಲಸ. ಈ ದೇವರಿಗೆ ಹಾರ ಹಾಕಿದ ನಂತರವೇ ಸುದ್ದಿಗೋಷ್ಠಿ. ಇಂಥದ್ದೊಂದು ದೇವರು ಯಾವುದೆಂದರೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್.
ಕೆಪಿಸಿಸಿ ಕಚೇರಿಯಲ್ಲಿ ಒಂದು ವಾರದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಸಿಲಿಂಡರ್ ಪ್ರತಿಷ್ಠಾಪಿಸಿದ್ದಾರೆ. ಇದರ ಉದ್ದೇಶವೇನಪ್ಪ ಎಂದರೆ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಮಾತನ್ನು ತಿರುಗಿಸಿ ಅವರಿಗೇ ಕೊಡುವುದು.
2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಮೋದಿ ಅವರು, ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದ್ದನ್ನು ಟೀಕಿಸಿದ್ದರು. ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್‌ಗೆ ನಮಸ್ಕರಿಸಿ ಮತ ಹಾಕಿ ಎಂಬ ಸಂದೇಶವನ್ನು ಜನರಿಗೆ ನೀಡಿದ್ದರು.
ಪ್ರತಿ ಸಿಲಿಂಡರ್‌ಗೆ 500-600 ರೂ. ಇದ್ದದ್ದು ಇದೀಗ 1,200 ರೂ. ಆಸುಪಾಸಿಗೆ ಬಂದು ನಿಂತಿದೆ. ಇದು ಮುಖ್ಯವಾಗಿ ಗೃಹಿಣಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟು ದುಬಾರಿ ಮೊತ್ತದ ಸಿಲಿಂಡರ್ ಖರೀದಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ.
ವಿವಿಧ ಸಮೀಕ್ಷೆಗಳಲ್ಲೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರು ಬೆಲೆಯೇರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಿರುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಕ್ಕೆ ನೇರವಾಗಿ ತಟ್ಟುತ್ತಿದೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡಿರುವ ಡಿ.ಕೆ. ಶಿವಕುಮಾರ್, ಈ ಬಾರಿಯ ಚುನಾವಣೆಯಲ್ಲೂ ಪ್ರಧಾನಿ ಮೋದಿಯವರ ಮಾತಿನಂತೆ ನಾವು ನಮ್ಮ ಪಕ್ಷದ ಚುನಾವಣೆ ಪ್ರಚಾರ ಆರಂಭಿಸುವ ಮುನ್ನ ಅಡುಗೆ ಅನಿಲ ಸಿಲಿಂಡರ್‌ಗೆ ನಮಿಸಲು ತೀರ್ಮಾನಿಸಿದ್ದೇವೆ. ಇದೇ ಪದ್ಧತಿಯನ್ನು ಬ್ಲಾಕ್ ಹಾಗೂ ಬೂತ್ ಮಟ್ಟದ ನಾಯಕರೂ ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ. ಮತದಾರರು ಮತದಾನ ಮಾಡುವ ಮುನ್ನ ಇದೇ ರೀತಿ ನಮಿಸಿ ಮತದಾನ ಮಾಡಲಿ ಎಂದು ತಿಳಿಸಿದ್ದಾರೆ.
ಈಗ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸುದ್ದಿಗೋಷ್ಠಿ ನಡೆದರೂ ಮೊದಲಿಗೆ ಸಿಲಿಂಡರ್‌ಗೆ ನಮಿಸಲಾಗುತ್ತದೆ. ಈ ಮೂಲಕ ಕಾಂಗ್ರೆಸಿಗೆ ಹೊಸ ಮನೆ ದೇವರು ಸಿಕ್ಕಂತಾಗಿದೆ. 2014ರಲ್ಲೇನೊ ಮೋದಿಯವರಿಗೆ ಈ ದೇವರು ಭರ್ಜರಿ ಆಶೀರ್ವಾದ ಮಾಡಿತು, ಅವರು ಪ್ರಧಾನ ಮಂತ್ರಿ ಆಗಿಬಿಟ್ಟರು. ಆದರೆ ಈಗ ಈ ಸಿಲಿಂಡರ್ ದೇವರು ಡಿ.ಕೆ. ಶಿವಕುಮಾರ್ ಸಿಎಂ ಆಗಲು ಆಶೀರ್ವಾದ ಮಾಡುತ್ತದೆಯೇ? ಅಥವಾ ಡಿ.ಕೆ. ಶಿವಕುಮಾರ್ ಸ್ಥಾಪಿಸಿದ ಸಿಲಿಂಡರ್ ಬಳಸಿ ಸಿದ್ದರಾಮಯ್ಯ ಭರ್ಜರಿ ಊಟ ಮಾಡುತ್ತಾರೆಯೇ ಕಾದುನೋಡಬೇಕು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.