Site icon Vistara News

Karnataka Congress: ಕಾಂಗ್ರೆಸ್ ಶಾಸಕರ ಸಭೆಯಲ್ಲಿ 3 ಬಿಜೆಪಿ ಶಾಸಕರು‌ ಪ್ರತ್ಯಕ್ಷ, ಕೈ ಸೇರ್ಪಡೆ ಖಚಿತ?

somashekhar vishwanath hebbar

ಬೆಳಗಾವಿ: ನಿನ್ನೆ ನಡೆದ ಕಾಂಗ್ರೆಸ್ (Karnataka Congress) ಶಾಸಕಾಂಗ ಪಕ್ಷದ ಸಭೆಯಲ್ಲಿ (Congress CLP meet) ಮೂವರು ಬಿಜೆಪಿ ಶಾಸಕರು (BJP MLA) ಕಾಣಿಸಿಕೊಂಡಿದ್ದಾರೆ. ಬಿಜೆಪಿ ಶಾಸಕರಾದ ಶಿವರಾಮ್ ಹೆಬ್ಬಾರ್ (Shivaram Hebbar), ಎಸ್.ಟಿ ಸೋಮಶೇಖರ್ (ST Somashekar), ಹೆಚ್. ವಿಶ್ವನಾಥ್ (H Vishwanath) ಸಭೆ ನಡೆಯುವ ಸ್ಥಳಕ್ಕೆ ಬಂದು ಹೋಗಿದ್ದು, ಈ ಮೂವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಸಭೆಯ ಬಳಿ ಕಾಣಿಸಿಕೊಂಡ ಮೂವರು ಬಿಜೆಪಿ ಶಾಸಕರಲ್ಲಿ ಒಬ್ಬರು ಸಭೆ ಅಟೆಂಡ್ ಮಾಡಿದ್ದಾರೆ. ಎಸ್.ಟಿ ಸೋಮಶೇಖರ್ ಅವರು ಸಿಎಲ್‌ಪಿ ಸಭೆಗೆ ಹಾಜರಾಗಿದ್ದು, ಕೆಲ ಹೊತ್ತು ಸಭೆಯಲ್ಲಿ ಕುಳಿತು ಬಳಿಕ ಊಟಕ್ಕೆ ತೆರಳಿದ್ದಾರೆ ಎಂದು ಗೊತ್ತಾಗಿದೆ. ಮೂವರೂ ಡಿಸಿಎಂ ಡಿ.ಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿ ಮರಳಿ ಬಂದಿದ್ದಾರೆ.

ಈ ಮೂವರೂ ಬಿಜೆಪಿಯಲ್ಲಿ ತಾವು ಅನುಭವಿಸುತ್ತಿರುವ ಅತೃಪ್ತಿಯನ್ನು ಹಲವಾರು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮೂವರೊಂದಿಗೂ ತಾವು ಸಂಪರ್ಕದಲ್ಲಿರುವುದಾಗಿ ಡಿಕೆಶಿ ಸೇರಿದಂತೆ ಕಾಂಗ್ರೆಸ್‌ ವರಿಷ್ಠರು ಕೂಡ ಹೇಳಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಪಾಳಯದಲ್ಲಿ ಇವರ ಚಲನವಲನ ಕುತೂಹಲವನ್ನೂ ಬಿಜೆಪಿಯಲ್ಲಿ ಆತಂಕವನ್ನೂ ಮೂಡಿಸಿದೆ.

ಎಸ್‌ಟಿಎಸ್‌ ಡ್ಯಾನ್ಸ್‌ !

ಸಿಎಲ್‌ಪಿ ಸಭೆ ಬಳಿಕ ಶಾಸಕರಿಗೆ ಭರ್ಜರಿ ಪಾರ್ಟಿ, ಔತಣಕೂಟವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಆಯೋಜಿಸಿದ್ದರು. ಶಾಸಕರಿಗಾಗಿ ಸಂಗೀತ ಸಂಜೆಯನ್ನೂ ಏರ್ಪಡಿಸಿದ್ದರು. ಸಾಧು ಕೋಕಿಲ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ನಡೆದಿದ್ದು, ʼನೀನೆ ರಾಜಕುಮಾರʼ ಹಾಡಿಗೆ ಎಸ್.ಟಿ ಸೋಮಶೇಖರ್ ನೃತ್ಯ ಮಾಡಿದರು ಎಂದು ತಿಳಿದುಬಂದಿದೆ. ಅವರು ವೇದಿಕೆ ಮೇಲೆಯೇ ತೆರಳಿ ನೃತ್ಯ ಮಾಡಿದ್ದು, ಈ ವೇಳೆ ಶಿವರಾಮ್ ಹೆಬ್ಬಾರ್ ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದರು.

ಶಿಸ್ತು ಉಲ್ಲಂಘಿಸಿಲ್ಲ: ಆರ್.‌ ಅಶೋಕ್‌

ಕಾಂಗ್ರೆಸ್‌ ಸಿಎಲ್‌ಪಿ ಸಭೆಗೆ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್.ವಿಶ್ವನಾಥ್ ಹೋಗಿರುವ ವಿಚಾರದಲ್ಲಿ ಮಾತನಾಡಿರುವ ವಿಪಕ್ಷ ಅಧ್ಯಕ್ಷ ಆರ್.‌ ಅಶೋಕ್‌ (R Ashok), ಶಾಸಕರು ಶಿಸ್ತು ಉಲ್ಲಂಘಿಸಿಲ್ಲ ಎಂದಿದ್ದಾರೆ.

“ಊಟಕ್ಕೆ ಕರೆದಿದ್ದರು, ಅದಕ್ಕಾಗಿ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ. ನಾನು ಕೂಡ ಅವರ ಬಳಿ ಮಾತನಾಡಿದ್ದೇನೆ. ಅವರು ನಿನ್ನೆ ಬಿಜೆಪಿ ಧರಣಿಯಲ್ಲೂ ಕೂಡ ಭಾಗವಹಿಸಿದ್ದಾರೆ. ಆದರೂ ನಾನು ಅವರನ್ನು ಕರೆದು ಮಾತನಾಡುತ್ತೇನೆʼʼ ಎಂದು ಅಶೋಕ್‌ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್‌ ಕಾಂಗ್ರೆಸ್‌ ಸೇರುವುದು ಖಚಿತ: ತಾಂತ್ರಿಕವಾಗಷ್ಟೇ ಬಿಜೆಪಿಯಲ್ಲಿ ಉಳಿದ ʼಹಳ್ಳಿ ಹಕ್ಕಿʼ

Exit mobile version