ಕರ್ನಾಟಕದಲ್ಲಿ ಈತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಅಭೂತಪೂರ್ವವಾಗಿ ಗೆದ್ದು, ಸರ್ಕಾರ ರಚನೆ ಮಾಡಿ ಆಡಳಿತ ಶುರು ಮಾಡಿರುವ ಕಾಂಗ್ರೆಸ್ (Congress Government) 2025ರ ಹೊತ್ತಿಗೆ ಇಬ್ಭಾಗವಾಗುತ್ತದೆಯಂತೆ. ಖ್ಯಾತ ಜ್ಯೋತಿಷಿ, ಶ್ರೀರಾಮ ಮಂದಿರ ನಿರ್ಮಾಣದ ವರ್ಷ-ದಿನಾಂಕದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ಅನಿರುದ್ಧ ಕುಮಾರ್ ಮಿಶ್ರಾ (Astrologer Anirudh Kumar Mishra) ಅವರು ಈ ಮಾತನ್ನು ಹೇಳಿದ್ದಾರೆ. ಇನ್ನೆರಡು ವರ್ಷದಲ್ಲಿ ಕಾಂಗ್ರೆಸ್ (Karnataka Congress) ಇಬ್ಭಾಗವಾಗಿ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರವೇ ಆಡಳಿತಕ್ಕೆ ಬರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ನಕಾಶೆಯ ಫೋಟೋ ಹಾಕಿ ಟ್ವೀಟ್ ಮಾಡಿರುವ ಜ್ಯೋತಿಷಿ ಅನಿರುದ್ಧ ಕುಮಾರ್ ‘ಕರ್ನಾಟಕದಲ್ಲಿ 2025ರಲ್ಲಿ ಕಾಂಗ್ರೆಸ್ ಶಾಸಕರಲ್ಲಿ ಎರಡು ಬಣಗಳಾಗುತ್ತವೆ. ಅದರಲ್ಲಿ ಒಂದು ಬಣದ ಶಾಸಕರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸೇರಿಕೊಂಡು ಈಗಿರುವ ಸರ್ಕಾರವನ್ನು ಕೆಡವುತ್ತಾರೆ’ ಎಂದು ಹೇಳಿದ್ದಾರೆ. ಅಂದರೆ ಇನ್ನು ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವೇ ಬರುತ್ತದೆ. ಅದಕ್ಕೆ ಕಾಂಗ್ರೆಸ್ ಶಾಸಕರೇ ಸಹಾಯ ಮಾಡುತ್ತಾರೆ ಎಂಬುದು ಟ್ವೀಟ್ ಸಾರಾಂಶವಾಗಿದೆ.
In Karnataka, Congress MLAs will be divided into two factions in 2025 and one of those factions will join hands with BJP and JDS to replace the existing state govt. headed by Congress. pic.twitter.com/5HH41bnZ4l
— Anirudh Kumar Mishra (Astrologer) (@Anirudh_Astro) July 8, 2023
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆದು, 13ರಂದು ಫಲಿತಾಂಶ ಹೊರಬಿದ್ದಿದೆ. ಐದು ಪ್ರಮುಖ ಗ್ಯಾರಂಟಿ ಭರವಸೆ ಆಧಾರದಲ್ಲೇ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಈ ಸಲ 135 ಕ್ಷೇತ್ರಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತದಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ 66 ಮತ್ತು ಜೆಡಿಎಸ್ 19 ಸೀಟ್ಗಳನ್ನು ಗೆದ್ದುಕೊಂಡವು. ಕರ್ನಾಟಕ ವಿಧಾನಸಭೆಯಲ್ಲಿ 224 ಶಾಸಕರನ್ನು ಹೊಂದಿದ್ದು, ಯಾವುದೇ ಪಕ್ಷ ಸ್ವಂತ ಸರ್ಕಾರ ರಚನೆ ಮಾಡಲು 113 ಕ್ಷೇತ್ರಗಳನ್ನು ಗೆಲ್ಲಬೇಕು. ಅಂದರೆ ಇಲ್ಲಿ ಬಹುಮತದ ಗಡಿ 113. ಈ ಸಲ ಬಿಜೆಪಿ-ಜೆಡಿಎಸ್ ಮತ್ತು ಇತರ (4) ಸೇರಿದ್ದರೂ 113ರ ಬಲ ತಲುಪುತ್ತಿರಲಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರ ರಚಿಸಿದ್ದರೂ ಅಲ್ಲಿನ್ನೂ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಪಟ್ಟ ವಿವಾದ, ಸಚಿವ ಸ್ಥಾನ ಆಕಾಂಕ್ಷಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಿರುವಾಗಲೇ ಜ್ಯೋತಿಷಿ ಅನಿರುದ್ಧ ಮಿಶ್ರಾ ಅವರ ಭವಿಷ್ಯ ಕುತೂಹಲ ಕೆರಳಿಸಿದೆ.
ಇನ್ನು ಅನಿರುದ್ಧ ಮಿಶ್ರಾ ಅವರು ಈ ಹಿಂದೆ 2017ರಲ್ಲಿ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಭವಿಷ್ಯ ನುಡಿದಿದ್ದರು. 2017ರ ನವೆಂಬರ್ನಲ್ಲಿ ಟ್ವೀಟ್ ಮಾಡಿದ್ದ ಅನಿರುದ್ಧ ಮಿಶ್ರಾ ‘ಶ್ರೀರಾಮ ಮಂದಿನ ನಿರ್ಮಾಣ ಕಾರ್ಯ ಇನ್ನು 2ವರ್ಷ 3 ತಿಂಗಳಲ್ಲಿ ಪ್ರಾರಂಭವಾಗಲಿದೆ’ ಎಂದಿದ್ದರು. ಅದರಂತೆ 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದು, ಮಂದಿರ ನಿರ್ಮಾಣದ ರೂಪುರೇಷೆ ರಚಿತಗೊಂಡು, 2020ರ ಆಗಸ್ಟ್ನಿಂದ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇನ್ನು 2019ರಲ್ಲಿ ಹರ್ಯಾಣ ವಿಧಾನ ಸಭೆ ಚುನಾವಣೆ ವೇಳೆ ಆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅನಿರುದ್ಧ ಮಿಶ್ರಾ ಹೇಳಿದ್ದೂ ನಿಜವಾಗಿತ್ತು. 2019ರಲ್ಲಿ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟ್ಗಳನ್ನು ಗೆಲ್ಲಲಿದೆ ಎಂಬಿತ್ಯಾದಿ ಭವಿಷ್ಯವನ್ನೂ ಅವರು ಹೇಳಿದ್ದು, ಸತ್ಯವಾಗಿತ್ತು.